ಮೈಸೂರು: ತಮ್ಮ ಸಮುದಾಯದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬ್ರಹ್ಮರ್ಷಿ ನಾರಾಯಣ ಗುರು ಶಕ್ತಿ ಪೀಠದ ಸ್ವಾಮೀಜಿ ಶ್ರೀ ಪ್ರಣವಾನಂದ ಸ್ವಾಮೀಜಿ ಜನವರಿ 6 ರಿಂದ ಮಂಗಳೂರಿನಿಂದ ಬೆಂಗಳೂರಿನ ವರೆಗೆ 658 ಕಿಮೀ ದೂರದ ಐತಿಹಾಸಿಕ ಪಾದಯಾತ್ರೆಯನ್ನ ಕೈಗೊಂಡಿದ್ದಾರೆ. ತಮ್ಮ ಸಮುದಾಯದ ಬೇಡಿಕೆಗಳ ಈಡೇರಿಕೆಗಾಗಿ ಈ ಪಾದಯಾತ್ರೆ ಎಂದು ಈಟಿವಿ ಭಾರತ ಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದು ಸಂದರ್ಶನದ ಸಾರಾಂಶ ಹೀಗಿದೆ.
ರಾಜ್ಯದ ಬಿಲ್ಲವ, ಈಡಿಗ, ನಾಮಧಾರಿ ಜನಾಂಗದ ಬ್ರಹ್ಮರ್ಷಿ ನರಾಯಣಗುರು ಶಕ್ತಿ ಪೀಠದ ಶ್ರೀಗಳಾದ ಪ್ರಣವಾನಂದ ಸ್ವಾಮೀಜಿಯವರು ತಮ್ಮ ಸಮಾಜದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಜನವರಿ 6 ರಿಂದ ಮಂಗಳೂರಿನಿಂದ ಬೆಂಗಳೂರುವರೆಗೆ 658ಕಿಮೀ ದೂರದ ಐತಿಹಾಸಿಕ ಪಾದಯಾತ್ರೆ ಕೈಗೊಂಡಿದ್ದು, ಅದರ ಉದ್ದೇಶವನ್ನು ಶ್ರೀಗಳು ವಿವರಿಸಿದ್ದಾರೆ.
ರಾಜ್ಯದಲ್ಲಿ ಈಡಿಗ, ಬಿಲ್ಲವ, ನಾಮಧಾರಿ ಎಂದು ಹೇಳಿಕೊಳ್ಳುವ 70 ಲಕ್ಷ ಜನ ಇದ್ದಾರೆ. ಈಗಿನ ರಾಜ್ಯ ಬಿಜೆಪಿ ಸರ್ಕಾರದಲ್ಲಿ 7 ಜನ ಶಾಸಕರು ಇಬ್ಬರು ಸಚಿವರು ಇದ್ದಾರೆ. ಅವರಿಂದ ನಮ್ಮ ಸಮುದಾಯಕ್ಕೆ ಯಾವುದೇ ನ್ಯಾಯ ದೊರಕಿಲ್ಲ. ಈಗ ನಮ್ಮ ಪಾದಯಾತ್ರೆಯ ಬೇಡಿಕೆ ಏನೆಂದರೆ ಬ್ರಹ್ಮರ್ಷಿ ನಾರಾಯಣ ಗುರು ಹೆಸರಿನಲ್ಲಿ ಅಭಿವೃದ್ಧಿ ನಿಗಮ ಮಾಡಬೇಕು, ಇದಕ್ಕಾಗಿ 500 ಕೋಟಿ ಮಿಸಲಿಡಬೇಕು, ನಮ್ಮ ಜನಾಂಗದ ಕುಲಕಸುಬು ಸೇಂದಿ ಇಳಿಸಲು ಅನುಮತಿ ನೀಡಬೇಕು ಎಂದು ಸರ್ಕಾರಕ್ಕೆ ಶ್ರೀಗಳು ಒತ್ತಾಯಿಸಿದರು.
ಅಲ್ಲದೆ, ಈಡಿಗ ಸಮುದಾಯದ ನೇತೃತ್ವದಲ್ಲಿ ನಡೆಯುತ್ತಿರುವ ಸಿಗಂದೂರು ಚೌಡೇಶ್ವರಿ ದೇವಾಲಯದ ಮೇಲೆ ಸರ್ಕಾರ ನಡೆಸುತ್ತಿರುವ ಹಸ್ತಕ್ಷೇಪ ಹಾಗೂ ದೌರ್ಜನ್ಯ ನಿಲ್ಲಿಸಬೇಕು, ನಮ್ಮ ಜನಾಂಗ ಹೆಚ್ಚಾಗಿರುವ ಜಿಲ್ಲೆಗಳಲ್ಲಿ ರಾಜಕೀಯ ಪ್ರಾತಿನಿಧ್ಯತೆ ನೀಡಬೇಕು, 2ಎ ವರ್ಗದಲ್ಲಿರುವ ನಮ್ಮ ಅನುದಾಯಕ್ಕೆ ಯಾವುದೇ ಅನ್ಯಾಯ ಆಗದ ರೀತಿಯಲ್ಲಿ ನೋಡಿಕೊಳ್ಳಬೇಕು, ಮೀಸಲಾತಿ ಹೆಚ್ಚಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಜನವರಿ 6 ರಿಂದ ಮಂಗಳೂರಿನಿಂದ ಬೆಂಗಳೂರಿನವರೆಗೆ 658 ಕಿ ಮೀ ದೂರದ ಐತಿಹಾಸಿಕ ಪಾದಯಾತ್ರೆಯನ್ನ ಕೈಗೊಂಡಿದ್ದೇವೆ ಎಂದು ತಿಳಿಸಿದರು.
ಮುಂದುವರೆದು, ಫೆಬ್ರವರಿ 14 ರಂದು ಬೆಂಗಳೂರಿನ ಫ್ರಿಡಂ ಪಾರ್ಕ್ ನಲ್ಲಿ ಅಮರಣಾಂತ ಉಪವಾಸ ಮಾಡುತ್ತೇವೆ, ನಮ್ಮ ಸಮುದಾಯದ 7 ಜನ ಶಾಸಕರು ಇಬ್ಬರು ಸಚಿವರು ಸರ್ಕಾರದ ಮೇಲೆ ಒತ್ತಡ ಹಾಕಬೇಕು, ಇದಕ್ಕೆ ಮುಖ್ಯಮಂತ್ರಿಗಳು ಒಪ್ಪದೆ ಇದ್ದರೆ ರಾಜೀನಾಮೆ ಕೊಟ್ಟು ನಮ್ಮ ಜೊತೆ ಕೈಜೋಡಿಸಬೇಕು, ಎಂದು ಸಮುದಾಯದ ಶ್ರೀಗಳಾದ ಪ್ರಣವಾನಂದ ಸ್ವಾಮೀಜಿ ಸಂದರ್ಶನದಲ್ಲಿ ವಿವರಿಸಿದ್ದಾರೆ.
ಇದನ್ನೂ ಓದಿ: ಮೈಸೂರು: ಸಿ ಟಿ ರವಿ ಫ್ಲೆಕ್ಸ್ಗೆ ಮದ್ಯ ಸುರಿದು ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ