ಮೈಸೂರು: ಇಂದು ಇಸ್ಕಾನ್ ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗಿದ್ದು, ಭಕ್ತರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ನೇರ ಪ್ರಸಾರ ವ್ಯವಸ್ಥೆ ಮಾಡಲಾಗಿದ್ದು, ಯಾವುದೇ ಭಕ್ತರು ಇಸ್ಕಾನ್ಗೆ ಬರದಂತೆ ಮನವಿ ಮಾಡಲಾಗಿದೆ.
ದೇಶಾದ್ಯಂತ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಎರಡು ದಿನಗಳ ಕಾಲ ಆಚರಿಸಲಾಗುತ್ತಿದೆ. ಇಂದು ಮೈಸೂರಿನ ಇಸ್ಕಾನ್ ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ ಕಳೆ ಕಟ್ಟಿತ್ತು. ಬೆಳಗ್ಗೆ ಇಸ್ಕಾನ್ ನಲ್ಲಿ ಶ್ರೀ ಕೃಷ್ಣನಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು, ಪೂಜಾ ಕೈಂಕರ್ಯಗಳನ್ನು ಮೈಸೂರು ಯೂಟ್ಯೂಬ್ ಚಾನಲ್ ಮತ್ತು ಫೇಸ್ ಬುಕ್ ನಲ್ಲಿ ನೇರ ಪ್ರಸಾರ ಮಾಡಲಾಯಿತು.
ಈ ಸಂದರ್ಭದಲ್ಲಿ ಇಸ್ಕಾನ್ನ ಪುರೋಹಿತರಾದ ಗುಣಾವಾರ್ಣ ದಾಸ್ ಮಾತನಾಡಿ, ಜಗತ್ತನ್ನು ರಕ್ಷಣೆ ಮಾಡುತ್ತಿರುವ ಕೃಷ್ಣನ ಜನ್ಮದಿನವನ್ನು ನಾವೆಲ್ಲಾ ಆಚರಿಸುತ್ತಿದ್ದೇವೆ. ಪ್ರತಿ ವರ್ಷ ಬಹಳ ಅದ್ಧೂರಿಯಿಂದ ಎಲ್ಲ ಭಕ್ತರನ್ನು ಮಂದಿರಕ್ಕೆ ಆಹ್ವಾನಿಸಿ ಆಚರಿಸುತ್ತಿದ್ದೆವು. ಆದರೆ, ಈ ಬಾರಿ ಕೊರೊನಾ ವೈರಸ್ ಕಾರಣದಿಂದ ಭಕ್ತರಿಗೆ ಪ್ರವೇಶವಿಲ್ಲ, ಭಕ್ತರು ತಮ್ಮ ಮನೆಯಲ್ಲೆ ಸುರಕ್ಷಿತವಾಗಿ ಆರೋಗ್ಯ ಕಾಪಾಡಿಕೊಂಡು ಮನೆಯಲ್ಲೆ ಆಚರಣೆ ಮಾಡಿ ಎಂದರು.
ಇನ್ನು ಭಕ್ತರಿಗಾಗಿ ದೇವಸ್ಥಾನದಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳನ್ನು ಇಸ್ಕಾನ್ ಮೈಸೂರು ಯೂಟ್ಯೂಬ್ ಚಾನಲ್ ಮತ್ತು ಫೇಸ್ಬುಕ್ ನಲ್ಲಿ ನೇರಪ್ರಸಾರ ಮಾಡುತ್ತೇವೆ. ಇವತ್ತು 10:15 ಕ್ಕೆ ವಿಶೇಷವಾದ ಮಹಾಭಿಷೇಕವಿದೆ. ಮನೆಯಲ್ಲೆ ವೀಕ್ಷಿಸಬಹುದು. ಇದು ಆರೋಗ್ಯದ ದೃಷ್ಟಿಯಿಂದ ನಾವೆಲ್ಲ ತೆಗೆದುಕೊಂಡಿರುವ ಆದೇಶ. ಮನೆಯಲ್ಲೇ ಭಗವಂತನ ಸ್ಮರಣೆ ಮಾಡಿ ಹಬ್ಬದ ರೀತಿಯಲ್ಲಿ ನಡೆಯುತ್ತಿದೆ. ಆದರೆ, ಭಕ್ತರು ದೇವಸ್ಥಾನಕ್ಕೆ ಬರಲು ಅವಕಾಶವಿಲ್ಲ, ಹಾಗಾಗಿ ಎಲ್ಲರೂ ಮನೆಯಲ್ಲೆ ಇದ್ದು ಭಗವಂತನ ದರ್ಶನ ಮಾಡಬಹುದು ಎಂದು ತಿಳಿಸಿದರು.