ಮೈಸೂರು: ಇಂದು ಮೂರನೇ ಆಷಾಢ ಶುಕ್ರವಾರದ ಸಂಭ್ರಮ. ನಾಡ ಅಧಿದೇವತೆಗೆ ಮಹಾಲಕ್ಷ್ಮಿ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ಇದರ ಜೊತೆಗೆ ದೇವಾಲಯದ ಒಳಭಾಗದಲ್ಲಿ ವಿವಿಧ ಬಗೆಯ ಹೂವುಗಳು ಹಾಗೂ ಸೊಪ್ಪುಗಳಿಂದ ವಿಶೇಷ ಅಲಂಕಾರ ಮಾಡಲಾಗಿದೆ.
ದರ್ಶನಕ್ಕೆ ವ್ಯವಸ್ಥೆ: ಭಕ್ತರು ಬೆಳಗ್ಗಿನಿಂದಲೇ ತಾಯಿಯ ದರ್ಶನ ಪಡೆಯುತ್ತಿದ್ದು, ರಾತ್ರಿಯವರೆಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಭಕ್ತರ ಅನುಕೂಲಕ್ಕಾಗಿ ಸರತಿ ಸಾಲಿನ ವ್ಯವಸ್ಥೆ ಹಾಗೂ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಚಾಮುಂಡಿ ತಾಯಿಯ ಉತ್ಸವ ಮೂರ್ತಿಗೆ ಲಕ್ಷ್ಮಿ ಅಲಂಕಾರ ಹಾಗೂ ಮೂಲ ಮೂರ್ತಿಗೆ ಮಹಾಲಕ್ಷ್ಮಿ ಅಲಂಕಾರ ಮಾಡಿರುವುದು ವಿಶೇಷವಾಗಿದೆ. ಬೆಳಗ್ಗೆ 3:30ರಿಂದಲೇ ಚಾಮುಂಡಿ ತಾಯಿಯ ಮೂಲ ಮೂರ್ತಿಗೆ ರುದ್ರಾಭಿಷೇಕ, ಪಂಚಾಮೃತಾಭಿಷೇಕ ಹಾಗೂ ಮಹಾಮಂಗಳಾರತಿ ನೆರವೇರಿಸಲಾಗಿದೆ.
ಉಚಿತ ಬಸ್ ವ್ಯವಸ್ಥೆ: ಬೆಳಗ್ಗೆ 5: 30ರಿಂದ ರಾತ್ರಿ 9:30 ರವರೆಗೆ ಭಕ್ತರಿಗೆ ದರ್ಶನ ವ್ಯವಸ್ಥೆ ಮಾಡಲಾಗಿದೆ. ಭಕ್ತರು ತಮ್ಮ ಖಾಸಗಿ ವಾಹನಗಳಲ್ಲಿ ಚಾಮುಂಡಿ ಬೆಟ್ಟಕ್ಕೆ ಬರುವುದನ್ನು ನಿಷೇಧಿಸಲಾಗಿದೆ. ಬೆಟ್ಟದ ಕೆಳಭಾಗದ ಲಲಿತ್ ಮಹಲ್ ಮೈದಾನದಿಂದ ಉಚಿತ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಳಗ್ಗೆಯಿಂದ ರಾತ್ರಿ ೮:೩೦ರ ವರೆಗೆ ಉಚಿತ ಬಸ್ ಸೇವೆ ವ್ಯವಸ್ಥೆ ಮಾಡಲಾಗಿದೆ. ಭಕ್ತರು ತಮ್ಮ ಖಾಸಗಿ ವಾಹನಗಳನ್ನು ಲಲಿತ್ ಮಹಲ್ ಮೈದಾನದ ಪಕ್ಕದಲ್ಲಿ ಪಾರ್ಕಿಂಗ್ ಮಾಡಿ, ಬಸ್ನಲ್ಲಿ ಉಚಿತವಾಗಿ ಪ್ರಯಾಣಿಸಿ ದರ್ಶನ ಪಡೆಯಬಹುದು.
ಬಿಗಿ ಪೊಲೀಸ್ ಬಂದೋಬಸ್ತ್: ಭಕ್ತರ ಅನುಕೂಲಕ್ಕಾಗಿ ಚಾಮುಂಡಿ ಬೆಟ್ಟದಲ್ಲಿ ವಿಶೇಷವಾಗಿ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದ್ದು, ಡಿಸಿಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಮೂರನೇ ಆಷಾಢ ಶುಕ್ರವಾರದ ನಿಮಿತ್ತ, ಹೆಚ್ಚಿನ ಸಂಖ್ಯೆಯ ಭಕ್ತರು ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಆಗಮಿಸಿ ತಾಯಿಯ ದರ್ಶನ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತೀಯ ಸಿನಿಮಾ: ಅಮೆರಿಕದಲ್ಲಿ ಪ್ರಾಜೆಕ್ಟ್ ಕೆ ಟ್ರೇಲರ್ ಲಾಂಚ್
10ನೇ ತಾರೀಖು ಚಾಮುಂಡಿ ತಾಯಿಯ ವರ್ಧಂತಿ: ಆಷಾಢ ಮಾಸದ ಮೂರನೇ ಶುಕ್ರವಾರ ಹಾಗೂ ವರ್ಧಂತಿಯ ಬಗ್ಗೆ ದೇವಾಲಯದ ಪ್ರಧಾನ ಅರ್ಚಕರಾದ ಶಶಿಶೇಖರ್ ದೀಕ್ಷಿತ್ ಮಾಹಿತಿ ನೀಡಿದ್ದು, ಬೆಳಗ್ಗೆ 3:30 ರಿಂದಲೇ ರುದ್ರಾಭಿಷೇಕ, ಪಂಚಾಮೃತಾಭಿಷೇಕ ಹಾಗೂ ಮಹಾ ಮಂಗಳಾರತಿ ಮಾಡಿ ಉತ್ಸವ ಮೂರ್ತಿಗೆ ಲಕ್ಷ್ಮಿ ಅಲಂಕಾರ ಮಾಡಲಾಗಿದೆ. ಮೂಲ ಗರ್ಭಗುಡಿಯಲ್ಲಿರುವ ನಾಡ ಅಧಿದೇವತೆಗೆ ಮಹಾಲಕ್ಷ್ಮಿ ಅಲಂಕಾರ ಮಾಡಲಾಗಿದೆ. ದೇವಾಲಯವನ್ನು ವಿವಿಧ ಬಗೆಯ ಸೊಪ್ಪುಗಳು ಹಾಗೂ ಹೂವುಗಳಿಂದ ಅಲಂಕಾರ ಮಾಡಲಾಗಿದೆ. ಬೆಳಗ್ಗೆ 5:30 ರಿಂದ ರಾತ್ರಿ 9:30 ರವರೆಗೆ ಭಕ್ತರಿಗೆ ವಿಶೇಷ ದರ್ಶನ ವ್ಯವಸ್ಥೆ ಮಾಡಲಾಗಿದೆ. ಜುಲೈ 10 ರಂದು ನಾಡ ಅಧಿದೇವತೆ ಚಾಮುಂಡಿ ತಾಯಿಯ ವರ್ಧಂತಿ ಇರುವುದರಿಂದ, ಅಂದು ಬೆಳಗ್ಗೆ 8 ಗಂಟೆಯಿಂದ ರಾತ್ರಿ 10ರ ವರೆಗೆ ದೇವಿಯ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.
ಇದನ್ನೂ ಓದಿ: ಪಕ್ಷ ಕೊಟ್ಟ ಭರವಸೆಗಳನ್ನು ಸರ್ಕಾರ ಈಡೇರಿಸಿದೆ, ಎದೆ ಎತ್ತಿ ಉತ್ತರಿಸಿ: ಸಭೆಯಲ್ಲಿ ಶಾಸಕರಿಗೆ ಸಿದ್ದರಾಮಯ್ಯ ಕರೆ