ಮೈಸೂರು: ನಗರದ ಪೊಲೀಸ್ ಠಾಣೆಯಲ್ಲಿ ಶ್ರೀಕೃಷ್ಣನಿಗೆ ನಿತ್ಯವೂ ಪೂಜೆ ಜರುಗುತ್ತದೆ. ಕೃಷ್ಣ ಜನ್ಮಾಷ್ಟಮಿ ಬಂತೆಂದರೆ ಸಾರ್ವಜನಿಕರ ಜೊತೆ ಪೊಲೀಸರು ಸೇರಿಕೊಂಡು ವಿಶೇಷ ಪೂಜೆ ನೆರವೇರಿಸುತ್ತಾರೆ. ಏಕೆ ಗೊತ್ತಾ?
ನಗರದ ಅಗ್ರಹಾರದ ಕೆ.ಆರ್. ಪೊಲೀಸ್ ಠಾಣೆಯ ಒಳಗಡೆ ಕೃಷ್ಣ ದೇವಾಲಯವಿದ್ದು, ಮಹಾರಾಜರ ಕಾಲದಲ್ಲಿ ಇಲ್ಲಿ ದೇವಾಲಯ ನಿರ್ಮಾಣವಾಗಿತ್ತು. ಈ ದೇವಾಲಯದ ಸುತ್ತ ಇರುವ ಕಟ್ಟಡವನ್ನು ಮಹಾರಾಜರು ಕಟ್ಟಿಸಿದ್ದು, ಅಂದು ಕಚೇರಿಗೆ ಉಪಯೋಗಿಸುತ್ತಿದ್ದರು ಎನ್ನಲಾಗ್ತಿದೆ.
ನಂತರ ಈ ಕಟ್ಟಡವನ್ನು ಪೊಲೀಸ್ ಠಾಣೆಯಾಗಿ ಪರಿವರ್ತನೆ ಮಾಡಲಾಗಿದೆ. ಆ ಸಂದರ್ಭದಲ್ಲಿ ಈ ಕೃಷ್ಣ ದೇವಾಲಯದಲ್ಲಿ ದಿನಾಲು ಪೂಜೆ ಸಲ್ಲಿಸಲು ಪೊಲೀಸರು ಅರ್ಚಕರೊಬ್ಬರನ್ನು ನೇಮಿಸಿದ್ದರು. ಅಂದಿನಿಂದ ಠಾಣೆಯೊಳಗೆ ಕೃಷ್ಣನಿಗೆ ಪೂಜೆ ನಡೆಯುತ್ತದೆ.
ವಿಶೇಷ ಪೂಜೆ: ಕೃಷ್ಣ ಜನ್ಮಾಷ್ಟಮಿ ದಿನವಾದ ಇಂದು ಠಾಣೆಯಲ್ಲಿ ಇರುವ ಕೃಷ್ಣನಿಗೆ ಪೊಲೀಸರ ಜೊತೆ ಸಾರ್ವಜನಿಕರು ಸೇರಿಕೊಂಡು ವಿಶೇಷ ಪೂಜೆ ನೆರವೇರಿಸಿದರು. ದೇವಸ್ಥಾನ ಹಾಗೂ ವಿಗ್ರಹದ ಜೊತೆಗೆ ಠಾಣೆಗೆ ವಿಶೇಷ ಅಲಂಕಾರ ಮಾಡಲಾಗಿದೆ. ಠಾಣೆಯ ಮುಂದೆ ಬಣ್ಣ, ಬಣ್ಣದ ರಂಗೋಲಿಯನ್ನು ಸಹ ಬಿಡಿಸಲಾಗಿದೆ.