ಮೈಸೂರು: ಇಂದು ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ನಾಡಹಬ್ಬ ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಆಗಮಿಸಿರುವ ಅಭಿಮನ್ಯು ನೇತೃತ್ವದ ದಸರಾ ಗಜಪಡೆಗೆ ಅರಮನೆಯ ಮುಂಭಾಗದಲ್ಲಿ ವಿಶೇಷವಾಗಿ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು.
ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲು ಅರಮನೆಗೆ ಆಗಮಿಸಿರುವ ಅಭಿಮನ್ಯು ನೇತೃತ್ವದ ಗಜಪಡೆಗಳಾದ ಅರ್ಜುನ, ಭೀಮ, ಮಹೇಂದ್ರ, ಧನಂಜಯ, ಗೋಪಿ, ಕಂಜನ್ ಮತ್ತು ಹೆಣ್ಣಾನೆಗಳಾದ ವಿಜಯ ಹಾಗೂ ವರಲಕ್ಷ್ಮಿ ಆನೆಗಳಿಗೆ ಅರಮನೆಯ ಮುಂಭಾಗದ ಆನೆ ಮಾವುತರ ಶೆಡ್ನ ಹಿಂಭಾಗದಲ್ಲಿ ಮೈಸೂರಿನ ಅರಮನೆ, ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಲಾಯಿತು.
ಈ ವೇಳೆ ಈಟಿವಿ ಭಾರತದೊಂದಿಗೆ ಕಳೆದ 26 ವರ್ಷಗಳಿಂದ ಗಜಪಡೆಗೆ ಪೂಜೆ ಸಲ್ಲಿಸುತ್ತಿರುವ ಅರ್ಚಕರಾದ ಪ್ರಹ್ಲಾದ್ ರಾವ್ ಮಾತನಾಡಿ, ಗೌರಿ ಗಣೇಶ ಹಬ್ಬದ ಪ್ರಯುಕ್ತ ಪ್ರತ್ಯಕ್ಷ ಗಣಪತಿಯಾದ ಗಜಪಡೆಯ ಕಾಲು ತೊಳೆದು, ಅರಿಶಿಣ ಕುಂಕುಮ, ಬಿಲ್ವಪತ್ರೆ ಇಟ್ಟು, ಗಣಪತಿಗೆ ವಿಶೇಷವಾದ ಪಂಚಫಲಗಳನ್ನು ಇಟ್ಟು ಮಹಾಮಂಗಳಾರತಿ ಮಾಡಲಾಗುತ್ತದೆ. ಜೊತೆಗೆ ಆನೆಗಳಿಗೆ ನವಧಾನ್ಯಗಳನ್ನು ಕೊಟ್ಟು, ದೃಷ್ಟಿ ತೆಗೆದು ಪೂಜೆ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.
ಗಜಪಡೆ ಪೂಜೆಯಲ್ಲಿ ಪಾಲ್ಗೊಂಡ ಪೇಜಾವರ ಶ್ರೀಗಳು: ಈ ಬಾರಿ ಚಾತುರ್ಮಾಸ ವ್ರತಾಚರಣೆಯ ಹಿನ್ನೆಲೆಯಲ್ಲಿ ಮೈಸೂರು ನಗರದಲ್ಲೇ ಇರುವ ಪೇಜಾವರ ಶ್ರೀಗಳು, ಗಣೇಶ ಗೌರಿ ಹಬ್ಬದ ಹಿನ್ನೆಲೆಯಲ್ಲಿ ಅರಮನೆಗೆ ಆಗಮಿಸಿ, ಗಜಪಡೆಗೆ ಪೂಜೆ ಸಲ್ಲಿಸಿ, ನಂತರ ಎಲ್ಲಾ ಗಜಪಡೆಗೂ ಬಾಳೆಹಣ್ಣು ತಿನ್ನಿಸಿದರು. ಬಳಿಕ, ಈ ಬಾರಿ ನಾಡ ಹಬ್ಬ ದಸರಾ ಯಾವುದೇ ವಿಘ್ನಗಳಿಲ್ಲದೆ ನಿರ್ವಿಘ್ನವಾಗಿ ನಡೆಯಲಿ ಎಂದು ವಿನಾಯಕ ಹಾಗೂ ಶ್ರೀಕೃಷ್ಣನಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.
ಪೂಜೆ ವೇಳೆ ಮಳೆರಾಯನ ಆಶೀರ್ವಾದ: ಬಳಿಕ ಡಿಸಿಎಫ್ ಸೌರವ್ ಕುಮಾರ್ ಮಾತನಾಡಿ, ಗಣೇಶ ಚತುರ್ಥಿಯ ದಿನ ಗಜಪಡೆಗೆ ಪೂಜೆ ಸಲ್ಲಿಸುವಾಗಲೇ ಮಳೆ ಕೂಡ ಬಂದಿದ್ದು, ಇದು ಶುಭ ಸೂಚನೆ. ನಮ್ಮ ಕರ್ನಾಟಕ ರಾಜ್ಯದಲ್ಲಿ ಮಳೆ ಬರಲಿ, ಎಲ್ಲವೂ ಒಳ್ಳೆಯದಾಗಲಿ ಎಂದು ತಾಯಿಯನ್ನು ಪ್ರಾರ್ಥಿಸುತ್ತೇನೆ ಎಂದರು.
ಮುಂದುವರೆದು, ನಿನ್ನೆ ಮಹೇಂದ್ರ ಆನೆಗೆ ತೂಕ ಹಾಕಿದೆವು. ನಾಳೆ ಧನಂಜಯ ಆನೆಗೆ ಭಾರ ಹೊರುವ ತಾಲೀಮು ನಡೆಯಲಿದೆ. ಅದನ್ನು ಬಿಟ್ಟು ಸೆ.25ರಂದು ಎರಡನೇ ಹಂತದ ಐದು ಆನೆಗಳ ಗಜಪಡೆ ಆಗಮಿಸಲಿದೆ. ಅದರಲ್ಲಿ ಮೂರು ಹೊಸ ಮತ್ತು ಎರಡು ಹಳೆ ಅನೆಗಳು ಇರಲಿವೆ. ನಮ್ಮ ಗಜಪಡೆ ಆಶೀರ್ವಾದದಿಂದ ನಾಡಿನಲ್ಲಿ ಸುಖ ಸಂಪತ್ತು ಬರಲೆಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ ಎಂದು ಹೇಳಿದರು.
ರಾಜ್ಯದಲ್ಲಿ ಮಳೆ ಇಲ್ಲದೆ ಬರ ಪರಿಸ್ಥಿತಿ ಉಂಟಾಗಿದ್ದರೂ, ಗಜಪಡೆಗೆ ಪೂಜೆ ಸಲ್ಲಿಸುವಾಗ ಜೋರಾದ ಮಳೆ ಬಂದು, ಪೂಜೆ ನಿಂತ ನಂತರ ಮಳೆಯೂ ನಿಂತುಹೋಗಿದ್ದು ವಿಶೇಷ.
ಇದನ್ನೂ ಓದಿ: ₹2.5 ಕೋಟಿ ಮೌಲ್ಯದ ನೋಟು, ₹56 ಲಕ್ಷ ಮೌಲ್ಯದ ನಾಣ್ಯಗಳಿಂದ ಗಣಪತಿ ದೇಗುಲ ಅಲಂಕಾರ!- ನೋಡಿ