ಮೈಸೂರು: ಮೈತ್ರಿ ಸರ್ಕಾರ ಪತನಕ್ಕೆ ಕಾರಣವೇ ಕುಮಾರಸ್ವಾಮಿ. ನಮ್ಮವರನ್ನು ಹೊರಗಿನವರಂತೆ ಕಂಡರು. ಅವರು ನನ್ನನ್ನು ಕೂಡ ಸ್ನೇಹಿತನಂತೆ, ಮೈತ್ರಿ ಪಕ್ಷದ ನಾಯಕನಂತೆ ಕಂಡಿದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಆದರೆ, ಅವರು ನನ್ನನ್ನು ಶತ್ರುವಿನಂತೆ ಕಂಡು ದ್ವೇಷ ಸಾಧಿಸುತ್ತಲೇ ಹೋದರು ಎಂದು ಖಡಕ್ ಆಗಿಯೇ ತಿರುಗೇಟು ನೀಡಿದ್ದಾರೆ.
ನನ್ನನ್ನ ಕ್ಲರ್ಕ್ ರೀತಿ ನಡೆಸಿಕೊಂಡರು ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ಕುರಿತಂತೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅಧಿಕಾರ ನಡೆಸಲು ಬಾರದವರು ಹೀಗೆಯೇ ಹೇಳೋದು ಎಂದು ಕುಟುಕಿದರು.
ಬಿಜೆಪಿ ಅಧಿಕಾರಕ್ಕೆ ಬಂದಿದ್ದು ಅಸಂವಿಧಾನಾತ್ಮಕವಾಗಿ:
ಬಿಜೆಪಿ ಅಧಿಕಾರಕ್ಕೆ ಬಂದ ಕ್ರಮ, ಅಧಿಕಾರ ನಡೆಸುತ್ತಿರುವ ಬಗ್ಗೆ ತೀರ ಟೀಕೆ ಮಾಡಿದ ಸಿದ್ದರಾಮಯ್ಯ, ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಿದ್ದೇ ಅಸಂವಿಧಾನಾತ್ಮಕವಾಗಿ. ಜನರು ಈವರೆಗೆ 113 ಸೀಟು ಕೊಟ್ಟಿಲ್ಲ. ವಂಚನೆ ಮಾಡಿ ಅಧಿಕಾರ ಕಸಿದುಕೊಂಡಿದ್ದಾರೆ. ಮೈತ್ರಿ ಪಕ್ಷದ ಅತೃಪ್ತ ಶಾಸಕರನ್ನು ಬಳಸಿಕೊಂಡು ಹಿಂಬಾಗಿಲಿನಿಂದ ಕುದುರೆ ವ್ಯಾಪಾರ ಮಾಡಿ ಅನೈತಿಕತೆಯಿಂದಲೇ ಅಧಿಕಾರಕ್ಕೆ ಬಂದಿದ್ದಾರೆ ಎಂದರು.
ಆದರೆ, ಹೀಗೆ ಪಕ್ಷ ಬಿಟ್ಟು ಹೋದ ಅತೃಪ್ತ ಶಾಸಕರು ಅತಂತ್ರರಾಗಿದ್ದಾರೆ. ಅವರು ಮಾಡಿದ ತಪ್ಪಿಗೆ ಹೀಗೆ ಅತಂತ್ರರಾಗಿಯೇ ತಿರುಗಬೇಕು ಎಂಬುದು ನಮ್ಮ ಆಶಯ. ಈಗ ಅವರೆಲ್ಲಾ ಬಿಎಸ್ವೈ ವಿರುದ್ದವೇ ತಿರುಗಿ ಬಿದ್ದಿದ್ದಾರೆ. ಬಿಎಸ್ವೈಗೆ ಅವರಿಂದ ಧಮ್ಕಿ ಇದೆ ಎಂದು ಹೇಳಿದರು.
ಒಂದು ತಿಂಗಳಿದ ರಾಜ್ಯದಲ್ಲಿ ಸರ್ಕಾರ ಇಲ್ಲ:
ಸರ್ಕಾರ ಬದಲಾಗಿ ತಿಂಗಳೇ ಕಳೆದರು ಇನ್ನೂ ಸಚಿವರಿಗೆ ಖಾತೆ ಹಂಚಿಕೆಯೇ ಮಾಡಿಲ್ಲ. ಇನ್ನೂ ಸ್ವಪಕ್ಷದಲ್ಲೇ ಅತೃಪ್ತರಿದ್ದಾರೆ. ಇನ್ನೂ ಅವರ ಕತೆ ಏನೋ ಗೊತ್ತಿಲ್ಲ. ರಾಜ್ಯದಲ್ಲಿ ಇಷ್ಟೊಂದು ನೆರೆ-ಬರ ಇದ್ದರೂ ಒಂದು ರೂಪಾಯಿ ಕೂಡ ಬಿಎಸ್‌ವೈರಿಂದ ತರಲು ಆಗಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಈ ಪಕ್ಷಕ್ಕೆ ಸರ್ವಾಧಿಕಾರದ ಆಡಳಿತದ ಮೇಲೆ ನಂಬಿಕೆ ಜಾಸ್ತಿ. ಬಿಜೆಪಿ ಹೈಕಮಾಂಡ್‌ಗೆ ಯಡ್ಯೂರಪ್ಪ ಒಲ್ಲದ ಶಿಶುವಿನಂತೆ. ಅವರು ದೆಹಲಿ ಬೆಂಗಳೂರು ನಡುವೆ ಓಡಾಡುತ್ತಲೇ ಇದ್ದಾರೆ. ಆದರೆ, ಇನ್ನೂ ಕೂಡ ಅಮಿತ್ ಶಾ ಅವರನ್ನು ಭೇಟಿಯಾಗಿಲ್ಲ ಎಂದು ಬಿಎಸ್ವೈ ಅವರನ್ನು ಸಿದ್ದರಾಮಯ್ಯ ಟೀಕಿಸಿದರು.