ಮೈಸೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಎಲ್ಲಿ ಬೇಕಾದರೂ ಸ್ಪರ್ಧೆ ಮಾಡುವ ಅವಕಾಶ ಇದೆ. 224 ಕ್ಷೇತ್ರದಲ್ಲಿ ಎಲ್ಲಿ ಬೇಕಾದರೂ ಚುನಾವಣೆಗೆ ಸ್ಪರ್ಧಿಸುವವನು ನಿಜವಾದ ನಾಯಕ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮ ಸ್ಪರ್ಧೆಯ ಬಗ್ಗೆ ಟೀಕಿಸುವವರಿಗೆ ತಿರುಗೇಟು ನೀಡಿದ್ದಾರೆ.
ನಗರದಲ್ಲಿಂದು ಖಾಸಗಿ ಆಸ್ಪತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ಮಾತನಾಡಿದ ಅವರು, ನನಗೆ ಹೆಚ್ಚು ವರ್ಷ ಬದುಕಬೇಕೆಂಬ ಆಸೆಯಿದೆ. ಬದುಕಿ ಜನರ ಸೇವೆ ಮಾಡಬೇಕು ಎಂಬುದು ನನ್ನ ಆಸೆ. ಆದರೆ ನಾನು ಎಷ್ಟು ವರ್ಷ ಬದುಕುತ್ತೇನೆ ಎಂಬುದು ಗೊತ್ತಿಲ್ಲ, ಹೆಚ್ಚು ವರ್ಷ ಬದುಕಬೇಕೆಂಬ ಆಸೆಯಂತೂ ಇದೆ ಎಂದರು.
ರಾಜ್ಯದ 224 ಕ್ಷೇತ್ರದಲ್ಲಿ ಎಲ್ಲಿ ಬೇಕಾದರೂ ಸ್ಪರ್ಧೆ ಮಾಡುವವನೇ ನಿಜವಾದ ನಾಯಕ. ಪ್ರಜಾಪ್ರಭುತ್ವದಲ್ಲಿ ಯಾರು ಎಲ್ಲಿ ಬೇಕಾದರೂ ಸ್ಪರ್ಧಿಸುವ ಅವಕಾಶವಿದೆ. ಜನ ಬಯಸಿದ ಕಡೆ ಸ್ಪರ್ಧೆ ಮಾಡುತ್ತೇನೆ. ಕೋಲಾರದವರು ಬಯಸಿದರೆ ಕೋಲಾರದಲ್ಲಿ, ವರುಣದವರು ಬಯಸಿದರೆ ವರುಣದಲ್ಲಿ ಸ್ಪರ್ಧಿಸುತ್ತೇನೆ. ಮುಖ್ಯವಾಗಿ ಹೈಕಮಾಂಡ್ ಸೂಚಿಸಿದ ಕಡೆ ಸ್ಪರ್ಧೆ ಮಾಡುತ್ತೇನೆ ಎಂದು ತಮ್ಮನ್ನು ಟೀಕೆ ಮಾಡುವವರಿಗೆ ಪರೋಕ್ಷವಾಗಿ ಸಿದ್ದರಾಮಯ್ಯ ಟಾಂಗ್ ಕೊಟ್ಟರು.
ಇನ್ನು, ಶಾಸಕ ಪ್ರಿಯಾಂಕ್ ಖರ್ಗೆಗೆ ಕೊಲೆ ಬೆದರಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದು ಪ್ರಜಾಪ್ರಭುತ್ವಕ್ಕೆ ಮಾರಕ. ಸಾಹಿತಿಗಳು, ಚಿಂತಕರು, ಪತ್ರಕರ್ತರಿಗೆ ಹಾಗೂ ಪ್ರತಿ ಪಕ್ಷಗಳಿಗೆ ಬೆದರಿಕೆ ಹಾಕುವುದು ಒಳ್ಳೆಯ ಬೆಳವಣಿಗೆ ಅಲ್ಲ. ಬಿಜೆಪಿ ಆವರು ಮೊದಲಿನಿಂದಲೂ ಇಂತಹುಗಳನ್ನು ಪೋಷಣೆ ಮಾಡುತ್ತಾ ಬರುತ್ತಿದ್ದಾರೆ. ಕೇಂದ್ರ ಸರ್ಕಾರವು ಇದರ ಪರವಾಗಿದೆ ಎಂದು ಆರೋಪಿಸಿದರು.
ಸಿಎಂ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ಇವರೆಲ್ಲ ಇದರ ಭಾಗ. ಸಂವಿಧಾನದ 19ನೇ ವಿಧಿಯಡಿ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಲಾಗಿದೆ. ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ. ಭಯ ಹುಟ್ಟಿಸುವ ಮೂಲಕ ಬಿಜೆಪಿಯವರು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇನ್ನು, ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿಯುತ್ತಿರುವುದು ಸರಿಯಲ್ಲ. ಇದು ಸರ್ಕಾರದ ಮತ್ತು ಜನರ ದುಡ್ಡು, ಬಿಜೆಪಿಯದ್ದಲ್ಲ. ಜನ ಏನಾದರೂ ಕೇಸರಿಕರಣ ಮಾಡಿ ಅಂತ ಹೇಳಿಲ್ಲ. ಇವರಿಗೆ ಇಷ್ಟ ಬಂದ ಹಾಗೆ ಅಧಿಕಾರ ಮಾಡಲು ಆಗುವುದಿಲ್ಲ. ಇದು ಜನ ವಿರೋಧಿ, ಸಂವಿಧಾನ ವಿರೋಧಿ ಆಗುತ್ತದೆ. ಇವರು ಬಹುಮತ ಪಡೆದು ಅಧಿಕಾರಕ್ಕೆ ಬಂದಿಲ್ಲ. ಹಿಂಬಾಗಿಲಿನ ಮೂಲಕ ಅಧಿಕಾರ ಹಿಡಿದವರು ಎಂದು ವಾಗ್ದಾಳಿ ನಡೆಸಿದರು.
ಕುಮಾರಸ್ವಾಮಿ ವಿರುದ್ಧ ಸಿದ್ದರಾಮಯ್ಯ ಪ್ರತಿಕ್ರಿಯೆ: ಸಿದ್ದರಾಮಯ್ಯ ಅವರಿಗೆ ಎರಡು ಬಾರಿ ರಾಜಕೀಯ ಪುನರ್ಜನ್ಮ ಕೊಟ್ಟೆ ಎಂಬ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ನಾನು 8 ಚುನಾವಣೆ ಗೆಲ್ಲುವಾಗ ಕುಮಾರಸ್ವಾಮಿ ಎಲ್ಲಿದ್ದರು.
ಕುಮಾರಸ್ವಾಮಿ ರಾಜಕೀಯಕ್ಕೆ 1996ರಲ್ಲಿ ಬಂದರು. ಅಷ್ಟೊತ್ತಿಗೆ ನಾನು 5 ಬಾರಿ ಚುನಾವಣೆ ಗೆದ್ದಿದ್ದೆ. ನಾನು ಹೋಗದ ಕಾರಣ ಸಿದ್ದರಾಮಯ್ಯ ಗೆದ್ದರು ಎಂಬ ಕುಮಾರಸ್ವಾಮಿ ಹೇಳಿಕೆ ಬಾಲಿಶವಾಗಿದ್ದು, ಇದು ಮತದಾರರಿಗೆ ಮಾಡಿದ ಅವಮಾನ ಎಂದು ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ: ಹಿಂದುಗಳ ರಕ್ಷಣೆಗೆ 25 ಪ್ರಖರ ಹಿಂದುವಾದಿಗಳು ಚುನಾವಣೆಯಲ್ಲಿ ಸ್ಪರ್ಧೆ: ಪ್ರಮೋದ್ ಮುತಾಲಿಕ್