ಮೈಸೂರು : ವರುಣಾಗೆ ಸೊಮಣ್ಣನಾದರೂ ಬರಲಿ, ಯಾರಾದರೂ ಬರಲಿ, ನಾನು ಗೆದ್ದೇ ಗೆಲ್ಲುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಇಂದು ಸಂಜೆ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಜೊತೆ ಸುಮಾರು 1 ಗಂಟೆಗಳ ಕಾಲ ರಹಸ್ಯ ಮಾತುಕತೆ ನಡೆಸಿದರು. ಶ್ರೀಗಳ ಆಶಿರ್ವಾದ ಪಡೆದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
"ವರುಣಾ ಕ್ಷೇತ್ರಕ್ಕೆ ಸೋಮಣ್ಣನಾದರೂ ಬರಲಿ, ಬೇರೆ ಯಾರಾದರೂ ಬರಲಿ ನಾನು ಗೆದ್ದೇ ಗೆಲ್ಲುತ್ತೇನೆ. ಎದುರಾಳಿ ಯಾರು ಎಂದು ನೋಡುವುದಿಲ್ಲ. ಮತದಾರರ ಮೇಲೆ ವಿಶ್ವಾಸ ಇಟ್ಟಿದ್ದೇನೆ. ಸಿದ್ದರಾಮಯ್ಯ ಅವರನ್ನು ಗೆಲ್ಲಿಸಬೇಕೆಂದು ಮತದಾರರು ತೀರ್ಮಾನ ಮಾಡಿದ್ದಾರೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
"ಸೋಮಣ್ಣ ಈಗ ಪ್ರಚಾರಕ್ಕೆ ಬಂದಿದ್ದಾರೆ. ನನ್ನ ಮಗ ಈಗಾಗಲೇ ಪ್ರಚಾರ ಮಾಡಿ ಮುಗಿಸಿದ್ದಾನೆ. ಈಗಲೂ ರಾಹು ಕೇತುಗಳು ಇದ್ದಾರೆ. ನಾನು ಅದರ ಬಗ್ಗೆ ಮಾತನಾಡಲ್ಲ" ಎಂದರು. ಇಂದು ಸಂಸದ ಶ್ರೀನಿವಾಸ್ ಪ್ರಸಾದ್ ಮನೆಗೆ ವಿ.ಸೋಮಣ್ಣ ಭೇಟಿ ನೀಡದ ವಿಚಾರವಾಗಿ ಮಾತನಾಡಿ, "ಶ್ರೀನಿವಾಸ್ ಪ್ರಸಾದ್ ಬಿಜೆಪಿ ಮುಖಂಡರು. ಅವರನ್ನು ಭೇಟಿ ಮಾಡುವುದರಲ್ಲಿ ತಪ್ಪೇನು?. ಈ ಬಾರಿ ವರುಣಾದಲ್ಲಿ ಹಣದ ಹೊಳೆಯನ್ನೇ ಹರಿಸಲಿ. ಅದರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಏಪ್ರಿಲ್ 19ಕ್ಕೆ ನಾಮಪತ್ರ: ಏಪ್ರಿಲ್ 19 ರಂದು ವರುಣಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತೇನೆ. ಕೋಲಾರದಿಂದ ಸ್ಪರ್ಧೆ ಮಾಡುವ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಅವರು ಸ್ಪರ್ಧೆ ಮಾಡು ಎಂದರೆ ಮಾಡುತ್ತೇನೆ. ಇಲ್ಲ ಎಂದರೆ ವರುಣಾದಲ್ಲೇ ಇರುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು. ವರುಣಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ ನಂತರ ಒಂದು ದಿನ ಕ್ಷೇತ್ರದ ನಾಲ್ಕು ಕಡೆ ಪ್ರಚಾರ ಮಾಡುತ್ತೇನೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.
ಇದನ್ನೂ ಓದಿ : ಶ್ರೀನಿವಾಸ್ ಪ್ರಸಾದ್ ಮನೆಗೆ ಸೋಮಣ್ಣ ಭೇಟಿ : ಬೆಂಬಲ ನೀಡುವಂತೆ ಮನವಿ