ಮೈಸೂರು : ನೆನ್ನೆ ನಿಧನರಾಗಿದ್ದ ಹಿರಿಯ ಸಮಾಜವಾದಿ ಚಿಂತಕ ಹಾಗೂ ಪ್ರಗತಿಪರ ಹೋರಾಟಗಾರ, ಆತ್ಮೀಯ ಸ್ನೇಹಿತರಾದ ಪ. ಮಲ್ಲೇಶ್ ನಿವಾಸಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭೇಟಿ ನೀಡಿ ಅವರ ಅಂತಿಮ ದರ್ಶನ ಪಡೆದು, ಆತನ ಸಾವನ್ನು ನಂಬಲಿಕ್ಕೆ ನನಗೆ ಸಾಧ್ಯವಾಗುತ್ತಿಲ್ಲ ಎಂದು ಪ. ಮಲ್ಲೇಶ್ ಜೊತೆಗಿನ ಬಾಂಧವ್ಯವನ್ನು ವಿವರಿಸಿದರು.
ತಮ್ಮ ಬಹುಕಾಲದ ಸಮಾಜವಾದಿ ಸ್ನೇಹಿತ ಪ. ಮಲ್ಲೇಶ್ ನಿನ್ನೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಅವರ ನಿಧನಕ್ಕೆ ನೆನ್ನೆಯೇ ಟ್ವಿಟ್ ಮಾಡಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದರು. ಇಂದು ಬೆಂಗಳೂರಿನಿಂದ ಆಗಮಿಸಿದ ಸಿದ್ದರಾಮಯ್ಯ, ಮೈಸೂರಿನ ಕುವೆಂಪು ನಗರದಲ್ಲಿರುವ ಪ. ಮಲ್ಲೇಶ್ ಮನೆಗೆ ಭೇಟಿ ನೀಡಿ, ಅಲ್ಲಿ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ಈ ವೇಳೆ ಮಲ್ಲೇಶ್ ಜೊತೆಗಿನ ತಮ್ಮ ಒಡನಾಟವನ್ನ ಮೆಲುಕು ಹಾಕಿದ ಸಿದ್ದರಾಮಯ್ಯ, ಅವರ ಸಾವನ್ನ ನಂಬಲಿಕ್ಕೆ ಸಾಧ್ಯವಾಗುತ್ತಿಲ್ಲ ಎಂದರು.
ಕಳೆದ 15 ದಿನಗಳ ಹಿಂದೆ ನನಗೆ ಕರೆ ಮಾಡಿದ್ದರು. ಆಗ ನಾನು ಅವರ ಆರೋಗ್ಯ ವಿಚಾರಿಸಿದ್ದೆ. ಅವರು ನನಗೆ ಸ್ವಲ್ಪ ಕಾಲು ನೋವು ಇದೆ. ಅದನ್ನ ಬಿಟ್ಟರೆ ಬೇರೇನೂ ತೊಂದರೆ ಇಲ್ಲ ಎಂದು ಹೇಳಿದ್ದರು. ಆದರೆ, ಅವರು ಇಷ್ಟು ಬೇಗ ಸಾಯುತ್ತಾರೆ ಎಂದುಕೊಂಡಿರಲಿಲ್ಲ. ಕಳೆದ ಒಂದೂವರೆ ತಿಂಗಳ ಹಿಂದೆ ನೃಪತುಂಗ ವಿದ್ಯಾ ಸಂಸ್ಥೆಯಲ್ಲಿ, ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದರು. ಅವರ ಆರೋಗ್ಯ ಬಹಳ ಚೆನ್ನಾಗಿತ್ತು. ಅವರಿಗೆ ಯಾವುದೇ ಬೀಪಿ, ಶುಗರ್ ಕಾಯಿಲೆ ಇರಲಿಲ್ಲ, ನಾನು ಅವಾಗ ಅವನಿಗೆ ನೂರು ವರ್ಷ ಬದುಕ್ಕುತ್ತಿಯಾ ನೀನು ಎಂದು ಹೇಳಿದ್ದೆ. ಆದರೆ ನನಗಿಂತ ಮುಂಚೆಯೇ ಆತನಿಗೆ ಸಾವು ಬಂದಿದ್ದು ಬಹಳ ದುಃಖವಾಗಿದೆ ಎಂದು ಹೇಳಿದರು.
ಪ. ಮಲ್ಲೇಶ್ ಬಹಳ ಜನರಿಗೆ ರಾಜಕೀಯ ಮಾರ್ಗದರ್ಶನ ಮಾಡಿದ್ದಾರೆ. ಅವರೊಬ್ಬ ಜಾತ್ಯತೀತ ಮನೋಭಾವನೆ ಹೊಂದಿದ್ದ ವ್ಯಕ್ತಿಯಾಗಿದ್ದು, ಸಮಾಜವಾದಿ ಆತ. ಕನ್ನಡ ನಾಡಿನ ಜಲ, ನೆಲ, ಭಾಷೆಯ ಬಗ್ಗೆ ಅಪಾರವಾದ ಕಾಳಜಿ ಹೊಂದಿದ್ದ ವ್ಯಕ್ತಿ. ಅವರಲ್ಲಿ ಹೋರಾಟದ ಕಿಚ್ಚು ಇತ್ತು. ಯಾವುದೇ ವಿಚಾರವನ್ನ ಮುಚ್ಚು ಮರೆಯಿಲ್ಲದೇ ಹೇಳುತ್ತಿದ್ದರು. ರೈತ ಚಳವಳಿ, ಕಾರ್ಮಿಕ ಚಳವಳಿ ಜೊತೆಗೆ ಯಾವುದೇ ಅನ್ಯಾಯ, ಅಕ್ರಮದ ವಿರುದ್ಧ ಕಾನೂನು ಹೋರಾಟ ಮಾಡುತ್ತಿದ್ದ ಮಹಾನ್ ಹೋರಾಟಗಾರ ಪ. ಮಲ್ಲೇಶ್. ಆತನನ್ನ ಕಳೆದುಕೊಂಡಿದ್ದಕ್ಕೆ ತುಂಬಾ ದುಃಖವಾಗುತ್ತದೆ ಎಂದು ಬಹಳ ವಿಚಾರಗಳ ಬಗ್ಗೆ ಪ. ಮಲ್ಲೇಶ್ ಮತ್ತು ತಮ್ಮ ನಡುವಿನ ವಿಚಾರವನ್ನ ಸಿದ್ದರಾಮಯ್ಯ ಮೆಲುಕು ಹಾಕಿದರು.
ಕಣ್ಣೀರು ಹಾಕಿದ ಸಂಸದ ವಿ ಶ್ರೀನಿವಾಸ್ ಪ್ರಸಾದ್ : ಸ್ನೇಹಿತ ಹಾಗೂ ಪ್ರಗತಿಪರ ಚಿಂತಕ ಪ ಮಲ್ಲೇಶ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಬಂದ ಸಂಸದ ಶ್ರೀನಿವಾಸ್ ಪ್ರಸಾದ್, ಮೃತ ದೇಹದ ಮುಂದೆ ನಿಂತು ಕಣ್ಣೀರು ಹಾಕಿದರು. ನಂತರ ನಿವಾಸದ ಮುಂಭಾಗದಲ್ಲಿ ಹಳೇ ಸ್ನೇಹಿತರ ಜೊತೆ ಕುಳಿತುಕೊಂಡಿದ್ದರು. ಈ ಸಂದರ್ಭದಲ್ಲಿ ಪ. ಮಲ್ಲೇಶ್ ಅಂತಿಮ ದರ್ಶನ ಪಡೆಯಲು ಆಗಮಿಸಿದ ಸಿದ್ದರಾಮಯ್ಯ ಅವರ ಮನೆಯೊಳಗೆ ಹೋಗುತ್ತಿದ್ದಂತೆ, ಶ್ರೀನಿವಾಸ್ ಪ್ರಸಾದ್ ಮನೆ ಮುಂದೆ ಕುಳಿತ್ತಿದ್ದ ಜಾಗದಿಂದ ತೆರಳಿದರು.
ಸಿದ್ದರಾಮಯ್ಯ ಹಾಗೂ ಶ್ರೀನಿವಾಸ್ ಪ್ರಸಾದ್ ಸೇರಿದಂತೆ ಹಲವಾರು ನಾಯಕರುಗಳ, ಪ್ರಗತಿ ಪರ ಚಿಂತಕರ ಹಾಗೂ ಸಮಾಜವಾದಿ ವ್ಯಕ್ತಿತ್ವದ ಹಿನ್ನೆಲೆಯ ಜೊತೆ ಒಡನಾಟ ಹೊಂದಿದ್ದ ಪ. ಮಲ್ಲೇಶ್ ಅವರ ಅಂತಿಮ ದರ್ಶನ ಪಡೆಯಲು ಹಲವಾರು ವ್ಯಕ್ತಿಗಳು ಅವರ ನಿವಾಸಕ್ಕೆ ಆಗಮಿಸಿದ್ದು, ಅಂತಿಮ ದರ್ಶನ ಪಡೆದ ನಂತರ, ನೃಪತುಂಗ ಕನ್ನಡ ಶಾಲೆಯಲ್ಲಿ ಸ್ವಲ್ಪ ಸಮಯ ಅವರ ಪಾರ್ಥಿವ ಶರೀರವನ್ನು ಇಟ್ಟು, ನಂತರ ಅಂತ್ಯಕ್ರಿಯೆಗೆ ಪಾರ್ಥಿವ ಶರೀರವನ್ನು ಚಿತಾಗಾರಕ್ಕೆ ತೆಗೆದುಕೊಂಡು ಹೋಗಲಾಯಿತು.