ಮೈಸೂರು: ಮೊದಲ ಬಾರಿಗೆ ಕಾಂಗ್ರೆಸ್ನವರೇ ತಮ್ಮ ಪಕ್ಷದ ನಾಯಕರ ಬಗ್ಗೆ ಸತ್ಯ ಹೇಳಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವ್ಯಂಗ್ಯವಾಡಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕುರಿತು ಸ್ವಪಕ್ಷದವರೇ ಆದ ಮಾಜಿ ಸಂಸದ ಉಗ್ರಪ್ಪ ಹಾಗೂ ಮುಖಂಡ ಸಲೀಂ ಮಾತನಾಡಿರುವ ಬಗ್ಗೆ ಅರಮನೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಭ್ರಷ್ಟಾಚಾರಕ್ಕೆ ಮೂಲ ಹೆಸರು ಕಾಂಗ್ರೆಸ್. ಆ ಪಕ್ಷದ ನಾಯಕರು ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ನಿರಂತರವಾಗಿ ಭ್ರಷ್ಟಾಚಾರ ಮಾಡುತ್ತಿದ್ದಾರೆ. ಯುಪಿಎ ಸರ್ಕಾರದಲ್ಲಿ 10 ವರ್ಷ ಹಣ ಲೂಟಿ ಮಾಡಿದ್ದಾರೆ. ಅದೇ ಪದ್ಧತಿಯನ್ನು ರಾಜ್ಯದಲ್ಲೂ ಸಹ ಮುಂದುವರೆಸಿದ್ದರು ಎಂದು ಗಂಭೀರ ಆರೋಪ ಮಾಡಿದರು.
ದೇಶದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಅವರು, ರೈತರ ಹಿತ ಕಾಯಲು ಕೇಂದ್ರ ಸರ್ಕಾರ ಬದ್ಧವಾಗಿದೆ. ನಾವು ಸಹ ರೈತರ ಜೊತೆಗೆ ಚರ್ಚೆಗೆ ಸಿದ್ಧವಿದ್ದೇವೆ. ಈಗಾಗಲೇ 11 ರೌಂಡ್ ಚರ್ಚೆ ಆಗಿದೆ. ಆದರೆ ಪ್ರತಿಭಟನೆ ಹೆಸರಿನಲ್ಲಿ ರಾಜಕೀಯ ಮಾಡಲಾಗುತ್ತಿದೆ. ಚುನಾವಣೆವರೆಗೆ ಮಾತ್ರ ರಾಜಕೀಯ ನಡೆಯುತ್ತದೆ. ಪ್ರತಿಭಟನೆಯಲ್ಲಿರುವವರು ಎಲ್ಲರೂ ರೈತರಲ್ಲ. ಬೇರೆಯವರು ಸಹ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು.
ಅರಮನೆಯಲ್ಲಿ ಮಾವುತರು, ಕಾವಾಡಿಗಳಿಗೆ ಉಪಹಾರ ವ್ಯವಸ್ಥೆ:
ಪ್ರತಿ ವರ್ಷದಂತೆ ಈ ವರ್ಷ ಸಹ ಮಾವುತರು ಹಾಗೂ ಕಾವಾಡಿಗಳಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಉಪಹಾರದ ವ್ಯವಸ್ಥೆ ಮಾಡಿದ್ದರು. ಸ್ವತಃ ಸಚಿವರೇ ಮಾವುತರಿಗೆ ಉಪಹಾರ ಬಡಿಸಿದರು. ಈ ವೇಳೆ ಶೋಭಾ ಕರಂದ್ಲಾಜೆಗೆ ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ಸಾಥ್ ನೀಡಿದರು.