ಮೈಸೂರು: ಕಳ್ಳರು ಪೊಲೀಸ್ ಠಾಣೆಯ ಸಮೀಪದಲ್ಲೇ ಇರುವ ಅಂಗಡಿಗಳಲ್ಲಿ ಸರಣಿ ಕಳ್ಳತನ ಮಾಡಿರುವ ಘಟನೆ ನಗರದ ಅಗ್ರಹಾರದಲ್ಲಿ ನಡೆದಿದೆ.
ನಗರದ ಅಗ್ರಹಾರದಲ್ಲಿ ಕೆ.ಆರ್.ಪೊಲೀಸ್ ಠಾಣೆಯ ಸಮೀಪದಲ್ಲೇ ಅಂಗಡಿಗಳ ಸರಣಿ ಕಳ್ಳತನ ನಡೆದಿದೆ. ಮಧ್ಯರಾತ್ರಿ 2 ಅಂಗಡಿಗಳಲ್ಲಿ ಕಳ್ಳತನ ಮಾಡಿರುವ ಕಳ್ಳರು, ಮತ್ತೆರಡು ಅಂಗಡಿಗಳಲ್ಲಿ ಕಳ್ಳತನ ಮಾಡಲು ಯತ್ನಿಸಿದ್ದಾರೆ.
ಎಂ.ಜಿ.ರಸ್ತೆಯ ಅಕ್ಷಯ್ ಬಾರ್ ಮತ್ತು ರಾಮಣ್ಣ ಅಂಡ್ ಸನ್ಸ್ ಅಂಗಡಿಗಳ ಬೀಗ ಹೊಡೆದು ಒಳಗೆ ನುಗ್ಗಿ 24 ಸಾವಿರ ಹಣ, ಮದ್ಯದ ಬಾಟಲ್ಗಳನ್ನು ಕಳವು ಮಾಡಿದ್ದಾರೆ. ಜೊತೆಗೆ ಸಿಗರೇಟ್ ಪ್ಯಾಕೇಟ್ಗಳನ್ನು ಕದ್ದಿದ್ದಾರೆ. ನಂತರ ಡೈಲಿ ಮಾರ್ಟ್ ಮತ್ತು ಉಡುಪಿ ಉಪಹಾರ ಮಂದಿರಗಳಲ್ಲಿ ಕಳ್ಳತನಕ್ಕೆ ಯತ್ನಿಸಿದ್ದು, ಈ ಎರಡು ಅಂಗಡಿಗಳ ಬಾಗಿಲು ಹೊಡೆಯಲು ಸಾಧ್ಯವಾಗದೆ ಬಿಟ್ಟು ಹೋಗಿದ್ದಾರೆ.
ಅಂಗಡಿಯಲ್ಲಿ ಇದ್ದ ಸಿಸಿಟಿವಿ ಕ್ಯಾಮರಾಗಳಲ್ಲಿ ತಮ್ಮ ಮುಖ ಚಹರೆ ಸೆರೆಯಾಗಬಹುದೆಂದು ತಿಳಿದ ಕಳ್ಳರು, ಸಿಸಿಟಿವಿ ಕ್ಯಾಮರಾಗಳನ್ನು ಬೇರೆ ಕಡೆ ತಿರುಗಿಸಿದ್ದಾರೆ. ಆದರೂ ಸಿಸಿಟಿವಿ ಕ್ಯಾಮರಾಗಳಲ್ಲಿ ಕಳ್ಳರು ಮಂಕಿ ಕ್ಯಾಪ್ ಹಾಗೂ ಕೈ ಕವಚ ಧರಿಸಿ ಬಂದಿರುವ ಚಹರೆ ಪತ್ತೆಯಾಗಿದೆ ಎನ್ನುಲಾಗಿದ್ದು, ಸ್ಥಳಕ್ಕೆ ಪೊಲೀಸರು, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಕೆ.ಆರ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.