ಮೈಸೂರು : ಪಿಎಫ್ಐ ಕಾಂಗ್ರೆಸ್ ನ ಪಾಪದ ಕೂಸು ಎಂಬ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ಹೇಳಿಕೆಗೆ, ಎಸ್ಡಿಪಿಐ ಮತ್ತು ಪಿಎಫ್ಐ ಬಿಜೆಪಿಯ ಬೀ ಟೀಮ್ ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ವರುಣ ಶಾಸಕ ಯತೀಂದ್ರ ಅವರು, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ಪಿಎಫ್ಐ ಕಾಂಗ್ರೆಸ್ ನ ಪಾಪದ ಕೂಸು ಎಂಬ ಹೇಳಿಕೆಗೆ ತಿರುಗೇಟು ನೀಡಿದರು. ಎಸ್ ಡಿಪಿಐ, ಪಿಎಫ್‌ಐ ಎರಡೂ ಬಿಜೆಪಿಯ ಬಿ ಟೀಂಗಳು. ಅವರಿಂದಲೇ ಇವರ ಕೋಮುವಾದಿ ಬೇಳೆ ಬೇಯುತ್ತಿದೆ. ನಿಜವಾಗಿಯೂ ಬಿಜೆಪಿಯಲ್ಲಿ ಬದ್ಧತೆ ಇದ್ದಿದ್ದರೆ ಇವರ ಸರ್ಕಾರ ಬಂದಾಗಲೇ ಬ್ಯಾನ್ ಮಾಡಬೇಕಿತ್ತು. ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆ ನಾವು ಗಟ್ಟಿಯಾಗಿದ್ದೇವೆ ಎಂದು ತೋರಿಸಿಕೊಳ್ಳಲು ಈ ರೀತಿ ಬ್ಯಾನ್ ಮಾಡಿ ಗಿಮಿಕ್ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್ ಫ್ಲೆಕ್ಸ್ ಗೆ ಹಾನಿ : ಭಾರತ್ ಜೋಡೋ ಯಾತ್ರೆಯ ಮೂಲಕ ಕಾಂಗ್ರೆಸ್ ಗೆ ಸಿಗುತ್ತಿರುವ ಜನ ಬೆಂಬಲ ನೋಡಿ ಬಿಜೆಪಿಯವರಿಗೆ ಹೊಟ್ಟೆ ಉರಿಯುತ್ತಿದೆ. ಭಾರತ್ ಜೋಡೋ ಯಾತ್ರೆ ತಡೆಯಲು ಬಿಜೆಪಿ ಯತ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಗುಂಡ್ಲುಪೇಟೆ ಯಲ್ಲಿ ಹಾಕಿದ್ದ ಬ್ಯಾನರ್ ಹರಿಯುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ಸರ್ಕಾರ ವ್ಯವಸ್ಥಿತವಾಗಿ ದಸರಾ ನಡೆಸಲು ವಿಫಲ : ಇನ್ನು ನಾಡಹಬ್ಬ ದಸರಾದಲ್ಲಿ ಕಮೀಷನ್ ಪಡೆದಿರುವ ಬಗ್ಗೆ ಮಾತನಾಡುತ್ತಿರುವುದು ನನಗೂ ಕೇಳಿಬಂದಿದೆ. ನಾಡಹಬ್ಬ ದಸರೆಯಲ್ಲಿನ ಅವ್ಯವಸ್ಥೆಯಿಂದ ಮೈಸೂರಿನ ಮಾನ ಮರ್ಯಾದೆ ಹೋಗಿದೆ. ಈ ಬಾರಿ ಸರ್ಕಾರ ವ್ಯವಸ್ಥಿತವಾಗಿ ದಸರಾ ನಡೆಸಲು ವಿಫಲವಾಗಿದೆ. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರೇ ನೇರ ಹೊಣೆಗಾರರು. ಈ ಅವ್ಯವಸ್ಥೆಯ ಹೊಣೆಯನ್ನು ಅವರೇ ಹೊರಬೇಕು ಎಂದು ಇದೇ ಸಂದರ್ಭದಲ್ಲಿ ಆರೋಪಿಸಿದರು.
ಇದನ್ನೂ ಓದಿ : ಜೋಡೊ ಯಾತ್ರೆ ಫ್ಲೆಕ್ಸ್ ಹರಿದು ಹಾಕಿದರೆ, ನಾವೇನು ಹೆದರಲ್ಲ: ಡಿ ಕೆ ಶಿವಕುಮಾರ್