ಮೈಸೂರು: ಜಿಲ್ಲೆಯಲ್ಲಿ ಲಾಕ್‌ಡೌನ್ ಜಾರಿಗೊಳಿಸುವಂತೆ ಈ ಹಿಂದೆಯೂ ಸಹ ಮುಖ್ಯಮಂತ್ರಿ ಅವರಿಗೆ ಪತ್ರದ ಮೂಲಕ ಕೋರಲಾಗಿತ್ತು. ಆದರೆ ಈ ವಿಚಾರ ಕುರಿತು ಮುಖ್ಯಮಂತ್ರಿಗಳು ಗಮನ ಹರಿಸಿದಂತೆ ಕಾಣುತ್ತಿಲ್ಲವೆಂದು ಕೆ.ಆರ್. ನಗರ ಶಾಸಕ ಸಾ.ರಾ. ಮಹೇಶ್ ಖಾರವಾಗಿ ಮತ್ತೊಮ್ಮೆ ಸಿಎಂ ಪತ್ರ ಬರೆದಿದ್ದಾರೆ.
ಕೋವಿಡ್-19 ಮಹಾಮಾರಿ ದಿನದಿಂದ ದಿನಕ್ಕೆ ಮೈಸೂರು ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ವೈದ್ಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿರುವುದು ಆತಂಕಕಾರಿ ವಿಚಾರ. ಇದು ಸೋಂಕು ಸಮುದಾಯದಲ್ಲಿ ಹರಡುವಿಕೆಯ ಸೂಚನೆಯಾಗಿದೆ. ಆದ್ದರಿಂದ ದಯಮಾಡಿ ಆದಷ್ಟು ಬೇಗ ಲಾಕ್‌ಡೌನ್‌ಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಬೇಕೆಂದು ಟ್ವಿಟ್ಟರ್ ಹಾಗೂ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಮೈಸೂರು ಜಿಲ್ಲೆಯಲ್ಲಿ ಲಾಕ್‌ಡೌನ್ ಮಾಡುವಂತೆ, ಮೈಸೂರು ಮಹಾನಗರ ಪಾಲಿಕೆ ಮತ್ತು ಜಿಲ್ಲೆಯ ವ್ಯಾಪ್ತಿಯ ಕಂದಾಯ ಮನ್ನಾ ಮಾಡುವ ಬಗ್ಗೆ ಸಿಎಂಗೆ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಸೇಖರ್ ಅವರಿಗೆ ಪತ್ರದ ಮೂಲಕ ಶಾಸಕ ಮಹೇಶ್ ಮನವಿ ಮಾಡಿದ್ದಾರೆ.