ಮೈಸೂರು: ಹೆಚ್.ವಿಶ್ವನಾಥ್ ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಾಗ ಚಾಮುಂಡೇಶ್ವರಿ ಬೆಟ್ಟಕ್ಕೆ ತೆರಳಿ ಸಾ.ರಾ.ಮಹೇಶ್ ಹಾಗೂ ವಿಶ್ವನಾಥ್ ಇಬ್ಬರು ಆಣೆ ಪ್ರಮಾಣ ಮಾಡಿದ್ದರು. ಆ ಘಟನೆ ನಡೆದು ಇಂದಿಗೆ ವರ್ಷವಾದ ಕಾರಣ ಸಾ.ರಾ.ಮಹೇಶ್, ತಪ್ಪುಕಾಣಿಕೆ ಸಲ್ಲಿಸಿ ಚಾಮುಂಡಿಗೆ ಪೂಜೆ ಸಲ್ಲಿಸಿದರು.
ಸಾ.ರಾ.ಮಹೇಶ್ರವರ ಸವಾಲು ಸ್ವೀಕರಿಸಿ ಆಣೆ ಮಾಡಲು ಹೆಚ್.ವಿಶ್ವನಾಥ್ ಬಂದಿದ್ದರು. ಇಬ್ಬರು ನಾಯಕರು ಚಾಮುಂಡಿ ಬೆಟ್ಟದಲ್ಲೇ ನಿಂತು ರಾಜಕೀಯ ಪ್ರಹಸನ ನಡೆಸಿದ್ದರು. ಆದ್ರೆ ಕೊನೆಗೂ ಆಣೆ ಪ್ರಮಾಣ ಮಾಡದೆ ಇಬ್ಬರೂ ವಾಪಸ್ಸಾಗಿದ್ದರು.
ಹೈಕೋರ್ಟ್ ಸೋಮವಾರ ಹೆಚ್.ವಿಶ್ವನಾಥ್ ಸಚಿವರಾಗಲು ಅನರ್ಹ ಎಂದು ಮಧ್ಯಂತರ ತೀರ್ಪು ನೀಡಿದ್ದು ಇಂದು ಚಾಮುಂಡಿಬೆಟ್ಟಕ್ಕೆ ಬಂದು ಸಾ.ರಾ.ಮಹೇಶ್ ಪೂಜೆ ಸಲ್ಲಿಸಿದ್ದಾರೆ.
ನಂತರ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, 'ಆಣೆ ಪ್ರಮಾಣ ನಡೆದು ಸರಿಯಾಗಿ ಒಂದು ವರ್ಷಕ್ಕೆ ಸತ್ಯ ಯಾವುದು ಎಂಬುದು ತೀರ್ಮಾನವಾಗಿದೆ. ವಿಶ್ವನಾಥ್ಗೆ ದೇವರುಕೊಟ್ಟ ಶಿಕ್ಷೆ. ಚಾಮುಂಡಿ ತಾಯಿ ನ್ಯಾಯ ದೇವತೆ, ತಪ್ಪು ಮಾಡಿದವರಿಗೆ ಶಿಕ್ಷೆ ಕೊಟ್ಟಿದ್ದಾಳೆ. ನಾನು ದೇವಾಲಯದಲ್ಲಿ ಕಣ್ಣೀರಿಟ್ಟು ತಪ್ಪು ಯಾರದ್ದು? ಸರಿ ಯಾರದ್ದು? ಎಂದು ನೀನೇ ತೋರಿಸು ತಾಯಿ ಎಂದು ಕೇಳಿದ್ದೆ. ತಪ್ಪು ಮಾಡಿದ್ದರೂ ಭಂಡತನದಿಂದ ಶಕ್ತಿ ದೇವತೆ ಮುಂದೆ ಕೂತರೆ ಏನಾಗುತ್ತದೆ ಎಂಬುದಕ್ಕೆ ಇದು ಉದಾಹರಣೆ' ಎಂದು ಹೇಳಿದರು.
'ಇನ್ನುಳಿದ 16 ಜನರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ, ಆದರೆ ವಿಶ್ವನಾಥ್ ಒಬ್ಬರಿಗೇ ಶಿಕ್ಷೆ ಆಗುತ್ತದೆ ಎಂದರೆ ಅದರ ಅರ್ಥ ದೇವರ ಮುಂದೆ ಅವರು ಹೇಗೆ ನಡೆದುಕೊಂಡರು ಎಂಬುದು ಗೊತ್ತಾಗುತ್ತೆ' ಎಂದು ಇದೇ ವೇಳೆ ಅವರು ಟೀಕಿಸಿದರು.