ಮೈಸೂರು: ಜಿಲ್ಲೆಯಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಳವಾಗಲು ಜಿಲ್ಲಾಡಳಿತ ವೈಫಲ್ಯ ಕಾರಣ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಶಾಸಕ ಸಾ.ರಾ.ಮಹೇಶ್ ಕಿಡಿಕಾರಿದರು.
ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೋವಿಡ್ ಎರಡನೇ ಅಲೆ ನಿಭಾಯಿಸುವುದರಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಜಿಲ್ಲಾಡಳಿತದ ತಪ್ಪಿನಿಂದಲೇ 3 ಸಾವಿರ ಪಾಸಿಟಿವ್ ಪ್ರಕರಣಗಳು ಉಲ್ಬಣವಾಗುತ್ತಿದೆ. ಕೋವಿಡ್ನಿಂದ ಮೃತಪಟ್ಟವರ ಅಂತ್ಯಕ್ರಿಯೆ ಮಾಡುವುದರಲ್ಲಿ ನಿಮಯ ಪಾಲಿಸುತ್ತಿಲ್ಲ. ಮತ್ತೆ ಹೇಗೆ ನಿಯಂತ್ರಣಕ್ಕೆ ಬರಲಿದೆ? ಎಂದು ಪ್ರಶ್ನಿಸಿದರು.
ಡಿಸಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರತಿ ವಲಯದಲ್ಲೂ ಕೋವಿಡ್ ಕೇರ್ ತೆರೆಯಬೇಕು ಎನ್ನುತ್ತಾರೆ. ಅದಕ್ಕೆ ಬೇಕಿರುವ ವೈದ್ಯರನ್ನ ಎಲ್ಲಿಂದ ತರುತ್ತಾರೆ? ಅಧಿಕಾರಿಗಳನ್ನ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿಲ್ಲ. ಹಿಂದಿನ ಡಿಸಿ ಅಭಿರಾಂ ಜಿ ಶಂಕರ್ ಅವರು ಒಬ್ಬ ಡಿ ಗ್ರೂಪ್ ನೌಕರ ಹೇಳಿದ್ರು ಆ ಬಗ್ಗೆ ವಿಚಾರಿಸುತ್ತಿದ್ದರು. ಜಿಲ್ಲೆಗೆ ಅಭಿರಾಮ್ ಜಿ ಶಂಕರ್, ಹರ್ಷಗುಪ್ತ, ಶಿಖಾರಂತಹ ಅಧಿಕಾರಿ ಬೇಕು. ಕೋವಿಡ್ ಮೊದಲ ಅಲೆಯಲ್ಲಿ ಡಿಸಿಯಾಗಿದ್ದ ಅಭಿರಾಮ್ ಅವರು ಜಿಲ್ಲೆಯನ್ನ ಯಶಸ್ವಿಯಾಗಿ ನಡೆಸಿದರು ಎಂದರು.
ಈ ಸಮಸ್ಯೆಗಳನ್ನ ಅರಿತು ಸಾ.ರಾ ಬಳಗದಿಂದ ಕೋವಿಡ್ ಕೇರ್ ಸೆಂಟರ್ ತೆರೆದು, ಮೂವರು ವೈದ್ಯರನ್ನ ನಾವೇ ನೇಮಿಸಿದ್ದೇವೆ.
ಒಬ್ಬೊಬ್ಬ ವೈದ್ಯರಿಗೆ 1ಲಕ್ಷ ರೂ. ಸಂಬಳ ನೀಡಿ ನೇಮಿಸಿದ್ದೇವೆ. 200 ಬೆಡ್ಗಳ ಅಸ್ಪತ್ರೆಯನ್ನ ಸಾ.ರಾ ಸ್ನೇಹಬಳಗದಿಂದ ಮಾಡಲಿದ್ದೇವೆ. ಕೆಆರ್ ನಗರದಲ್ಲಿ ಎಸಿ, ಫ್ಯಾನ್, 200 ಬೆಡ್ಗಳಿರುವ ಆಸ್ಪತ್ರೆ ನಿರ್ಮಿಸಿ ತಾಲೂಕು ಆಡಳಿತಕ್ಕೆ ಒಪ್ಪಿಸುತ್ತೇವೆ ಎಂದರು.
ಕ್ಷೇತ್ರಕ್ಕೆ ಅನುದಾನ ಕೊಡಿ: ಕೆಆರ್ ನಗರಕ್ಕೆ ತಡೆ ಹಿಡಿದಿರುವ ಅನುದಾನ ಕೊಡಿ. ಸಭೆಗೆ ತಾಲೂಕು ಅಧಿಕಾರಿಗಳನ್ನು ಕರೆದರೆ ಸಾಲದು. ಕಾರ್ಯದರ್ಶಿ, ಜಿಲ್ಲಾಧಿಕಾರಿಯಂತಹ ಅಧಿಕಾರಿಗಳನ್ನು ಕರೆತರಬೇಕು ಎಂದು ಎಸ್.ಟಿ.ಸೋಮಶೇಖರ್ ವಿರುದ್ಧ ಕುಟುಕಿದರು.