ಮೈಸೂರು: ಖಾಸಗಿ ಆಸ್ಪತ್ರೆಗಳಲ್ಲಿ ತೆರೆಯಲಾಗಿದ್ದ ತಾತ್ಕಾಲಿಕ ಕೋವಿಡ್ ಸೆಂಟರ್ಗಳನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ರದ್ದು ಮಾಡಲು ಹೊರಟಿರುವುದು ಸರಿಯಲ್ಲ ಎಂದು ಶಾಸಕ ಸಾ.ರಾ.ಮಹೇಶ್ ಕಿಡಿಕಾರಿದರು.
ಇಂದು ತಮ್ಮ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮೈಸೂರಿನಲ್ಲಿ ಕೋವಿಡ್ ಹೆಚ್ಚಾದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ತಾತ್ಕಾಲಿಕವಾಗಿ ಕೋವಿಡ್ ಚಿಕಿತ್ಸಾ ಕೇಂದ್ರಗಳನ್ನು ತೆರೆಯಲು ಅನುಮತಿ ನೀಡಲಾಗಿತ್ತು. ಆದರೆ ಕೆಲವು ಖಾಸಗಿ ಆಸ್ಪತ್ರೆಗಳು ಕೋವಿಡ್ ರೋಗಿಗಳಿಂದ ಹಣ ಸುಲಿಗೆ ಮಾಡುತ್ತಿವೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಖಾಸಗಿ ಆಸ್ಪತ್ರೆಗಳ ಕೋವಿಡ್ ಸೆಂಟರ್ಗಳನ್ನು ಮೈಸೂರಿನಲ್ಲಿ ಕೂಡಲೇ ರದ್ದುಗೊಳಿಸಬೇಕೆಂದು ಆದೇಶ ಹೊರಡಿಸಿದ್ದಾರೆ. ಇದರಿಂದ ಖಾಸಗಿ ಆಸ್ಪತ್ರೆಗಳು ಕೋವಿಡ್ ಚಿಕಿತ್ಸೆ ನೀಡಲು ನಿಲ್ಲಿಸಿವೆ. ಇದರಿಂದ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ಕಷ್ಟವಾಗುತ್ತದೆ ಎಂದರು.
ಮುಖ್ಯಮಂತ್ರಿಗಳು ಕೋವಿಡ್ ಕೇರ್ ಸೆಂಟರ್ಗಳನ್ನು ಹೆಚ್ಚಿಸಿ ಎಂದು ಹೇಳಿದರೆ, ಮೈಸೂರು ಜಿಲ್ಲೆಯಲ್ಲಿ ಖಾಸಗಿ ಕೋವಿಡ್ ಕೇರ್ ಸೆಂಟರ್ಗಳನ್ನು ರದ್ದುಗೊಳಿಸುತ್ತಿರುವುದು ಸರಿಯಲ್ಲ. ಈ ಬಗ್ಗೆ ಶೀಘ್ರವಾಗಿ ಮರುಪರಿಶೀಲನೆ ಮಾಡಬೇಕೆಂದು ಆಗ್ರಹಿಸಿದರು.
ಕೆ.ಆರ್.ನಗರ ತಾಲೂಕಿನಲ್ಲಿ ಕೋವಿಡ್ ರೋಗಿಗಳಿಗೆ ಸರಿಯಾಗಿ ಮಾತ್ರೆಗಳು ಸಿಗುತ್ತಿಲ್ಲ. ಮೊದಲು ರೆಮ್ಡಿಸಿವಿರ್, ಆಕ್ಸಿಜನ್, ವೆಂಟಿಲೇಟರ್ಗಳ ಸಮಸ್ಯೆ, ಈಗ ಮಾತ್ರೆಗಳು ಸಹ ಸಿಗುತ್ತಿಲ್ಲ. ಜಿಲ್ಲಾಧಿಕಾರಿಗಳು ಮೈಸೂರು ನಗರದಲ್ಲಿ ಕೆಲಸ ಮಾಡುವುದನ್ನು ಬಿಟ್ಟು ತಾಲೂಕು ಕೇಂದ್ರಗಳಲ್ಲಿ ಕೆಲಸ ಮಾಡಬೇಕು. ಮೈಸೂರು ನಗರದಲ್ಲಿ ಕೆಲಸ ಮಾಡಲು ಪಾಲಿಕೆಯ ಆಯುಕ್ತರು ಇರುತ್ತಾರೆ. ಅವರಿಗೆ ಕೆಲಸ ಮಾಡಲು ಅವಕಾಶ ಕೊಡಿ ಎಂದು ಹೇಳಿದರು.
ತಾಲೂಕು ಕೇಂದ್ರಗಳಿಗೆ ಸರಿಯಾಗಿ ಕೋವಿಡ್ ಮಾತ್ರೆಗಳು ಬಂದಿಲ್ಲ. ಈ ಬಗ್ಗೆ ಗಮನಹರಿಸಬೇಕೆಂದು ಆಗ್ರಹಿಸಿದರು. ಇನ್ನು ಮುಖ್ಯಮಂತ್ರಿ ಘೋಷಣೆ ಮಾಡಿರುವ ಪ್ಯಾಕೇಜ್ನಲ್ಲಿ ಪುರೋಹಿತರಿಗೆ ಮಾನ್ಯತೆ ನೀಡಿಲ್ಲ. ಈ ಬಗ್ಗೆ ಗಮನಹರಿಸಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.
ಇದನ್ನೂ ಓದಿ: ಹರಪನಹಳ್ಳಿಯಲ್ಲಿ ಮತ್ತೆ ಮೂವರಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆ