ಮೈಸೂರು: ಶಾಸಕ ಸಾ.ರಾ. ಮಹೇಶ್ ಅವರ ಪತ್ನಿಯ ಹೆಸರಿನಲ್ಲಿರುವ ಸಾ.ರಾ. ಕಲ್ಯಾಣ ಮಂಟಪವನ್ನು ರಾಜಕಾಲುವೆ ಒತ್ತುವರಿ ಮಾಡಿ ನಿರ್ಮಾಣ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಪ್ರಾದೇಶಿಕ ಆಯುಕ್ತರು ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥ ಸ್ವಾಮಿ ನೇತೃತ್ವದಲ್ಲಿ ತಂಡ ರಚನೆ ಮಾಡಿದ್ದಾರೆ. ಈ ತಂಡ ಶನಿವಾರ ಸ್ಥಳ ಸರ್ವೇ ಮಾಡಿ ವರದಿಯನ್ನು ಪ್ರಾದೇಶಿಕ ಆಯುಕ್ತರಾದ ಜಿ.ಸಿ. ಪ್ರಕಾಶ್ ಅವರಿಗೆ ಸಲ್ಲಿಸಿತ್ತು.
ಆದರೆ ಈ ವರದಿಯನ್ನು ಮೈಸೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ ಅವರಿಗೆ ಸಲ್ಲಿಸುವಂತೆ ಪ್ರಾದೇಶಿಕ ಆಯುಕ್ತರು ಭಾನುವಾರ ವಾಪಸ್ ಕಳುಹಿಸಿದ್ದರು. ಈ ವರದಿ ಇಂದು ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥ ಸ್ವಾಮಿ, ಜಿಲ್ಲಾಧಿಕಾರಿಗೆ ಸಲ್ಲಿಸಿದ್ದಾರೆ.
ಪ್ರಕರಣದ ಹಿನ್ನೆಲೆ
ಶಾಸಕ ಸಾ.ರಾ. ಮಹೇಶ್ ತಮ್ಮ ಪತ್ನಿಯ ಒಡೆತನದಲ್ಲಿರುವ ಸಾ.ರಾ. ಕಲ್ಯಾಣ ಮಂಟಪ ನಿರ್ಮಾಣಕ್ಕಾಗಿ ರಾಜಕಾಲುವೆಯನ್ನು ಒತ್ತುವರಿ ಮಾಡಿ ಹಾಗೂ ಕೆಲ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆರೋಪಿಸಿದ್ದರು.
ಈ ವರದಿಯ ಹಿನ್ನೆಲೆ ಸ್ವತಃ ಸಾ.ರಾ. ಏಕಾಂಗಿಯಾಗಿ ಪ್ರಾದೇಶಿಕ ಆಯುಕ್ತರ ಕಚೇರಿಯ ಎದುರು ಪ್ರತಿಭಟನೆ ಮಾಡಿ ತನಿಖೆಗೆ ಆಗ್ರಹಿಸಿದ್ದರು. ಈ ಹಿನ್ನೆಲೆ ಪ್ರಾದೇಶಿಕ ಆಯುಕ್ತರು ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥ ಸ್ವಾಮಿ ನೇತೃತ್ವದಲ್ಲಿ ತಂಡವನ್ನು ರಚಿಸಿ ಜೂನ್-13ರ ಒಳಗೆ ಸರ್ವೇ ನಡೆಸಿ ವರದಿ ನೀಡುವಂತೆ ಗಡುವು ನಿಡೀತ್ತು.