ಮೈಸೂರು : ಪ್ರಾಮಾಣಿಕರ ಬಗ್ಗೆ ಮಾತನಾಡಿದರೆ ಹುಚ್ಚರು ಎನ್ನುತ್ತಾರೆ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಾಧೀಶ ಸಂತೋಷ್ ಹೆಗ್ಡೆ ವಿಷಾದ ವ್ಯಕ್ತಪಡಿಸಿದರು.
ಮೈಸೂರಿನ ರೋಟರಿ ಸಭಾಂಗಣದಲ್ಲಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಭ್ರಷ್ಟರನ್ನು ದೂರುವುದು ಕಡಿಮೆ ಆಗುತ್ತಿದೆ. ಜೈಲಿಗೆ ಹೋಗಿ ಬಂದವರಿಗೆ ಹಾರ- ತುರಾಯಿ ಹಾಕಿ ಸನ್ಮಾನಿಸಿ, ಗೌರವಿಸಲಾಗುತ್ತಿದೆ ಎಂದು ಅಸಮಾಧಾನ ಹೊರ ಹಾಕಿದರು.
ಆಡಳಿತ ವ್ಯವಸ್ಥೆಯಿಂದಲೇ ಜನರಿಗೆ ಅನ್ಯಾಯವಾಗುತ್ತಿದೆ. ಇದು ಸಮಾಜದ ತಪ್ಪಲ್ಲ, ಈ ಬಗ್ಗೆ ಪ್ರಶ್ನೆ ಮಾಡದ ವ್ಯಕ್ತಿಗಳದ್ದೇ ತಪ್ಪು. ಮೊದಲೆಲ್ಲಾ ರಾಷ್ಟ್ರದ ಮಹಾನ್ ನಾಯಕರ ಭಾವಚಿತ್ರಗಳನ್ನು ಮನೆಗಳಲ್ಲಿ ಹಾಕಿ ಅವರಂತೆಯೇ ಮೇರು ವ್ಯಕ್ತಿಗಳಾಗಬೇಕೆಂದು ಮಕ್ಕಳಿಗೆ ತಿಳಿ ಹೇಳಲಾಗುತ್ತಿತ್ತು. ಆದರೀಗ,ಯಾರ ಭಾವಚಿತ್ರ ಹಾಕಿ ಅವರಂತೆ ಆಗಿ ಎಂದು ಹೇಳಬೇಕು? ಎಂದು ಪ್ರಶ್ನಿಸಿದರು.
ಕೆಲ ವರ್ಷಗಳ ಹಿಂದೆ ಸದನದಲ್ಲಿ ಅಶ್ಲೀಲ ಚಿತ್ರ ನೋಡಿದವರ ಫೋಟೋ ಹಾಕಿ ಅವರಂತೆಯೇ ನೀವು ಆಗಿ ಎಂದು ಮಕ್ಕಳಿಗೆ ಹೇಳಲು ಸಾಧ್ಯವೇ? ಸದನದಲ್ಲಿ ಅಶ್ಲೀಲ ಚಿತ್ರ ವೀಕ್ಷಣೆ ಮಾಡಿದವರು ಮತ್ತೆ ಮಂತ್ರಿಗಳಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಈ ಹಿಂದೆ ಶಾಲಾ-ಕಾಲೇಜುಗಳಲ್ಲಿ ಪಠ್ಯದ ಜೊತೆಗೆ ನೀತಿ ಪಾಠವನ್ನು ಅಳವಡಿಸಲಾಗುತ್ತಿತ್ತು. ಆದರೆ, ಇತ್ತೀಚೆಗೆ ನೀತಿ ಪಾಠವೇ ಮಾಯವಾಗಿದೆ. ವಿಜ್ಞಾನಿಯಾಗಬೇಕು, ದೊಡ್ಡ ಅಧಿಕಾರಿಯಾಗಬೇಕು ಎಂಬುದನ್ನು ಮಾತ್ರ ಶಿಕ್ಷಣದ ಮೂಲಕ ಹೇಳಿ ಕೊಡಲಾಗುತ್ತಿದೆ.
ಆದರೆ, ಯಾವ ದಾರಿಯಲ್ಲಿ ಸಾಗಬೇಕು ಎಂದು ಹೇಳಿ ಕೊಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಪ್ರಸ್ತುತ ಸಮಾಜದಲ್ಲಿ ಕೆಲ ಬದಲಾವಣೆಗಳು ಆಗಬೇಕಿದೆ. ಯುವಕ-ಯುವತಿಯರಿಂದ ಸಮಾಜದಲ್ಲಿ ಬದಲಾವಣೆ ಮಾಡಲು ಸಾಧ್ಯವಿದೆ. ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವೇ ಇಲ್ಲ ಎಂದು ಸುಮ್ಮನೆ ಕೂರಲು ಆಗುವುದಿಲ್ಲ ಎಂದು ಸಲಹೆ ನೀಡಿದರು.