ಮೈಸೂರು: ಮೈಸೂರು ಮಹಾನಗರ ಪಾಲಿಕೆಯ ಕೊನೆಯ ಅವಧಿಯ ಚುನಾವಣೆಯ ಮೀಸಲಾತಿ ವಿಳಂಬ ನೋಡಿದರೆ ಬಿಜೆಪಿ ಇಲ್ಲಿ 'ಆಪರೇಷನ್ ಕಮಲ' ಮಾಡಲು ಪ್ರಯತ್ನ ನಡೆಸಿದೆಯೇ ಎಂಬ ಅನುಮಾನ ಉಂಟಾಗುತ್ತದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಸಾ.ರಾ.ಮಹೇಶ್ ಹೇಳಿಕೆ ನೀಡಿದ್ದಾರೆ.
ಇಂದು ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಸಾ.ರಾ.ಮಹೇಶ್ ಕೊನೆಯ ಅವಧಿಗೆ ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆಗೆ ಮೀಸಲಾತಿ ಪ್ರಕಟಿಸಲು ಸರ್ಕಾರ ಮೀನಾಮೇಷ ಎಣಿಸುತ್ತಿದ್ದು ಜೊತೆಗೆ ವಿಳಂಬ ಮಾಡುತ್ತಿದೆ. ಇದನ್ನು ನೋಡಿದರೆ ಕಾರ್ಪೊರೇಷನ್ ಮಟ್ಟದಲ್ಲೂ ಅಪರೇಷನ್ ಮಾಡಲು ಪ್ರಯತ್ನ ನಡೆಯುತ್ತಿದೆ ಎಂಬ ಅನುಮಾನ ಬರುತ್ತಿದೆ ಎಂದರು.
ಜೆಡಿಎಸ್ ಕಾಂಗ್ರೆಸ್ ಜೊತೆ ಮೇಯರ್ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲು ಪೂರ್ವನಿಗದಿಯಂತೆ ಸಿದ್ದರಿದ್ದೇವೆ ಎಂದ ಸಾ.ರಾ.ಮಹೇಶ್, ಸಾಲಿಗ್ರಾಮ ಘಟನೆ ಬಗ್ಗೆ ಇಲ್ಲಸಲ್ಲದ ಸುದ್ದಿಗಳನ್ನು ಪ್ರಸಾರ ಮಾಡಬೇಡಿ, ಮನಸ್ಸುಗಳು ಬೆರೆಯುವ ಕೆಲಸ ಮಾಡಬೇಕು. ಅಲ್ಲಿನ ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ ತನಿಖೆ ನಂತರ ಸತ್ಯಾಂಶ ಗೊತ್ತಾಗಲಿದೆ. ಸ್ಥಳೀಯ ಪೋಲಿಸ್ ತನಿಖೆ ಬೇಡ ಎಂದರೆ ಸಿಒಡಿ ಅಥವಾ ಸಿಬಿಐ ತನಿಖೆಯಾದರೂ ಮಾಡಿಸಿ ನಾವು ಸಿದ್ದ ಎಂದು ಹೇಳಿದರು.