ಮೈಸೂರು: ಕಾಂಗ್ರೆಸ್ ತನ್ವೀರ್ ಸೇಠ್ರನ್ನು ವಜಾ ಮಾಡಿದರೆ, ಅವರನ್ನು ಜೆಡಿಎಸ್ ಸ್ವಾಗತ ಮಾಡುತ್ತದೆ ಎಂದು ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ಬಹಿರಂಗವಾಗಿಯೇ ಆಹ್ವಾನ ನೀಡಿದ್ದಾರೆ.
ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯಾದ ನಂತರ ಉಂಟಾಗಿರುವ ಗೊಂದಲದ ಬಗ್ಗೆ ಇಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದರು. "ನಾವು ಸ್ವತಂತ್ರವಾಗಿ ಪಾಲಿಕೆಯ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಲು ನಿರ್ಧರಿಸಿದ್ದೆವು. ಆದರೆ ಜೆಡಿಎಸ್ನ ಶಾಸಕ ಜಿ.ಟಿ ದೇವೇಗೌಡ ಹಾಗೂ ಎಂಎಲ್ಸಿ ಸಂದೇಶ್ ನಾಗರಾಜ್ ಗೈರು ಹಾಜರಾಗಿದ್ದರಿಂದ ಮೈತ್ರಿ ಮಾಡಿಕೊಳ್ಳಲು ಒಪ್ಪಿಕೊಂಡೆವು. ಆ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕರೆ ಮಾಡಿ ಕಾಂಗ್ರೆಸ್ಗೆ ಮೇಯರ್ ಸ್ಥಾನ ಬಿಟ್ಟುಕೊಡುವಂತೆ ಕೇಳಿದರು. ಆದರೂ ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಸ್ಥಳೀಯ ಮಟ್ಟದಲ್ಲಿ ತನ್ವೀರ್ ಸೇಠ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್ ಮಾತುಕತೆ ನಡೆಸಿ ಜೆಡಿಎಸ್ಗೆ ಮೇಯರ್ ಸ್ಥಾನ ಬಿಟ್ಟು ಕೊಡಲು ಒಪ್ಪಿದರು. ಅದರಂತೆ ಜೆಡಿಎಸ್ ಮೇಯರ್ ಸ್ಥಾನ ಪಡೆಯಿತು ಎಂದು ಸ್ಪಷ್ಟಪಡಿಸಿದರು.
ಮೈಸೂರಿನ ಮೇಯರ್ ಚುನಾವಣೆಯ ಮೈತ್ರಿ ಗೊಂದಲಕ್ಕೆ ಸಿದ್ದರಾಮಯ್ಯ ಕಾರಣ. ಜನತಾದಳದ ಶಕ್ತಿ ಏನು ಎಂಬುದನ್ನು ತವರು ಜಿಲ್ಲೆ ಮೈಸೂರಿನಿಂದಲೇ ತೋರಿಸುತ್ತೇವೆ. ತಾವು ಬೆಳೆದ ಪ್ರಾದೇಶಿಕ ಪಕ್ಷವನ್ನು ಲಘುವಾಗಿ ನೋಡಬೇಡಿ ಎಂದ ಸಾ.ರಾ. ಮಹೇಶ್ ಸಿದ್ದರಾಮಯ್ಯಗೆ ಎಚ್ಚರಿಕೆ ರವಾನಿಸಿದರು.
ಕಾಂಗ್ರೆಸ್ನಲ್ಲಿ ತನ್ವೀರ್ ಸೇಠ್ ಅವರನ್ನು ವಜಾ ಮಾಡಿದರೆ ಜೆಡಿಎಸ್ ಪಕ್ಷಕ್ಕೆ ಅವರನ್ನ ಸ್ವಾಗತಿಸುತ್ತೇವೆ ಎಂದು ತನ್ವೀರ್ ಸೇಠ್ ಮುಕ್ತ ಆಹ್ವಾನ ನೀಡಿದರು.