ಮೈಸೂರು: ಸಚಿವ ಈಶ್ವರಪ್ಪರನ್ನು ಎತ್ತಿಕಟ್ಟುವ ಮೂಲಕ ಕುರುಬರನ್ನು ವಿಭಜನೆ ಮಾಡಲು ಆರ್ಎಸ್ಎಸ್ ಹುನ್ನಾರ ಮಾಡುತ್ತಿದೆ ಎಂದು ಮಾಜಿ ಸಿಎಂ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು.
ಸಿದ್ದರಾಮನಹುಂಡಿಯಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಎರಡನೇ ಹಂತದ ಗ್ರಾಪಂ ಚುನಾವಣೆಯಲ್ಲಿ ಮತದಾನ ಮಾಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಮುಖ್ಯಮಂತ್ರಿಯಾಗಿದ್ದಾಗ, ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದ ಪ್ರಿಯಾಂಕ್ ಖರ್ಗೆ ಅವರ ಮೂಲಕ ಕುರುಬರ ಕುಲಶಾಸ್ತ್ರೀಯ ಅಧ್ಯಯನ ವರದಿ ನೀಡುವಂತೆ ಹೇಳಿದ್ದೆ. ಅದರಂತೆ ವರದಿಯನ್ನು ಸರ್ಕಾರಕ್ಕೆ ನೀಡಲಾಗಿದೆ. ಅದೇ ವರದಿಯನ್ನು ಈಗ ಈಶ್ವರಪ್ಪ ಜಾರಿ ಮಾಡಲಿ ಎಂದರು.
ಈಶ್ವರಪ್ಪನ ಹೋರಾಟ ಯಾರ ವಿರುದ್ಧ? ಯಾರಿಗೋಸ್ಕರ? ಕೇಂದ್ರ ಹಾಗೂ ರಾಜ್ಯದಲ್ಲಿ ಅವರ ಸರ್ಕಾರವೇ ಇದೆ. ಕುರುಬರನ್ನು ಎಸ್ಟಿಗೆ ಸೇರಿಸಲು ಶಿಫಾರಸ್ಸು ಮಾಡಲಿ. ಯಾಕೆ ಪಾದಯಾತ್ರೆ, ಯಾಕೆ ಸಭೆ.. ಇವರನ್ನು ಯಾರಾದರೂ ತಡೆಯುತ್ತಿದ್ದಾರಾ? ಇದು ಕುರುಬರನ್ನು ವಿಭಜನೆ ಮಾಡಲು ಆರ್ಎಸ್ಎಸ್ ನಡೆಸಿರುವ ಹುನ್ನಾರ ಎಂದು ಕಿಡಿಕಾರಿದರು.
ಎಚ್.ಡಿ. ದೇವೇಗೌಡರಿಗೆ ತಿರುಗೇಟು: ಮಲ್ಲಿಕಾರ್ಜುನ ಖರ್ಗೆ ಅವರು ಸಿಎಂ ಆಗದಂತೆ ಕಾಂಗ್ರೆಸ್ನವರೇ ತಡೆಹಿಡಿದರು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹೇಳಿದ್ದಾರೆ. ಅವರೇ ಹೆಸರನ್ನು ಬಹಿರಂಗ ಪಡಿಸಲಿ. ನಾನಂತೂ ಅವರ ಹೆಸರನ್ನು ತಡೆದಿಲ್ಲವೆಂದು ತಿರುಗೇಟು ನೀಡಿದರು.
ಸಿದ್ದರಾಮಯ್ಯ ಅವರ ಕೊಡುಗೆ ಜೆಡಿಎಸ್ಗೆ ಏನೂ ಇಲ್ಲ ಎಂಬ ವಿಚಾರ ಮಾತನಾಡಿ, 1999ರಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದವರು ಯಾರು? ಅವರ ಕೊಡುಗೆ ಏನು ಎಂದು ದೇವೇಗೌಡರು ಪ್ರಶ್ನಿಸಿಕೊಳ್ಳಲಿ ಎಂದು ಕುಟುಕಿದರು.