ಮೈಸೂರು: ಉತ್ತರ ಭಾರತದ ಹೈವೇಗಳಿಗೆ ಪವಿತ್ರ ನದಿಗಳ ಹೆಸರನ್ನ ಇಟ್ಟಿದ್ದಾರೆ. ಅದೇ ರೀತಿ ದಕ್ಷಿಣ ಭಾರತದ ಜೀವನದಿ ಕಾವೇರಿ ನದಿಯ ಹೆಸರನ್ನ ಬೆಂಗಳೂರು - ಮೈಸೂರು ಹೆದ್ದಾರಿಗೆ ಇಡಬೇಕೆಂದು ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದ್ದಾರೆ. ಜಲದರ್ಶಿನಿ ಅತಿಥಿ ಗೃಹದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತಾನಾಡಿದ ಅವರು, ನಿನ್ನೆ ಬೆಂಗಳೂರು - ಮೈಸೂರು ನಡುವಿನ ದಶಪಥ ಹೈವೇ ಕಾಮಗಾರಿಯನ್ನು ಪರಿಶೀಲನೆ ಮಾಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ, ಹೈವೆಯಲ್ಲೇ ಹೆಲಿಕಾಪ್ಟರ್ ಲ್ಯಾಂಡ್ ಮಾಡಿದ್ದು, ಕಾಮಗಾರಿ ಬಗ್ಗೆ ಕೇಂದ್ರ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ಬಹುತೇಕ ಫೆಬ್ರವರಿ ಕೊನೆಯ ವಾರದಲ್ಲಿ ಹೈವೇ ಕಾಮಗಾರಿ ಪೂರ್ಣಗೊಳ್ಳಲಿದ್ದು, ಮಾರ್ಚ್ ಮೊದಲ ಅಥವಾ ಎರಡನೇ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನ ಕರೆಯಿಸಿ ಮಂಡ್ಯದ ಬಳಿ ಉದ್ಘಾಟನೆ ಮಾಡಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಹೈವೇಗೆ ಕಾವೇರಿ ನದಿಯ ಹೆಸರಿಡಲು ಮನವಿ: ಉತ್ತರ ಭಾರತದಲ್ಲಿ ಹೈವೇಗಳಿಗೆ ಪವಿತ್ರ ನದಿಗಳ ಹೆಸರನ್ನ ಇಟ್ಟಿದ್ದಾರೆ, ಅದೇ ರೀತಿ ಬೆಂಗಳೂರು ಮತ್ತು ಮೈಸೂರು ನಡುವಿನ ದಶಪಥ ಹೆದ್ದಾರಿಗೆ ಜೀವನದಿ ಹಾಗೂ ಪವಿತ್ರ ನದಿಯಾದ ಕಾವೇರಿ ಹೆಸರನ್ನ ಇಡಬೇಕು ಎಂದು ನಾನು ಹಾಗೂ ಎಲ್ಲರೂ ಒಟ್ಟಾಗಿ ಕೇಂದ್ರಕ್ಕೆ ಮನವಿ ಮಾಡೋಣ, ಈ ವಿಚಾರದಲ್ಲಿ ಒಬ್ಬೊಬ್ಬರು ಒಂದೊಂದು ಹೆಸರನ್ನ ಹೇಳಬಾರದು, ನಮಗೆ ಕಾವೇರಿ ನದಿ ಕುಡಿಯಲು ನೀರು ಹಾಗೂ ಈ ಭಾಗದ ಜನರಿಗೆ ಬದುಕನ್ನ ಕೊಟ್ಟಿದೆ, ಅದ್ದರಿಂದ ಕಾವೇರಿ ನದಿಯ ಹೆಸರನ್ನ ಇಡಬೇಕು ಎಂದು ಎಲ್ಲರೂ ಒಟ್ಟಾಗಿ ಮನವಿ ಮಾಡೋಣ ಎಂದು ಸಂಸದರು ಹೇಳಿದರು.
ಈಗಾಗಲೇ ಮೈಸೂರಿನ ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರನ್ನ ಇಟ್ಟಿದ್ದೇವೆ, ಹಾಗೂ ಈ ಹೆದ್ದಾರಿಗೆ ಹೆಚ್ಡಿ ದೇವೇಗೌಡರ ಹೆಸರನ್ನ ಇಡಿ ಎಂದು ಕೇಳುತ್ತಿದ್ದಾರೆ. ಅದು ತಪ್ಪಲ್ಲ ಆದರೆ, ಎಲ್ಲಿಯೂ ಹೈವೆ ಗಳಿಗೆ ವ್ಯಕ್ತಿಯ ಹೆಸರುಗಳನ್ನ ಇಟ್ಟಿಲ್ಲ ಎಂದು ಹೇಳಿದ ಸಂಸದರು, ಎಲ್ಲರೂ ಒಟ್ಟಾಗಿ ಕಾವೇರಿ ನದಿಯ ಹೆಸರನ್ನ ಹೈವೇಗೆ ಇಡುವಂತೆ ಸಿಎಂ ಬಸವರಾಜ ಬೊಮ್ಮಾಯಿ ಮೂಲಕ ಮನವಿ ಮಾಡೋಣ ಎಂದರು.
ಹೈವೇಯಲ್ಲಿ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳಿಗೆ ಅವಕಾಶವಿಲ್ಲ: ಬೆಂಗಳೂರು- ಮೈಸೂರು ನಡುವಿನ ಪ್ರಮುಖ ಟ್ರ್ಯಾಕ್ ಗಳಲ್ಲಿ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳಿಗೆ ಅವಕಾಶವಿಲ್ಲ, ಸಂಪೂರ್ಣವಾಗಿ ಸರ್ವೀಸ್ ರೋಡ್ ನಲ್ಲಿ ಚಲಿಸಬೇಕು, ಆಕ್ಸಿಡೆಂಟ್ ಫ್ರೀ ಮಾಡುವ ಉದ್ದೇಶದಿಂದ ಈ ನಿರ್ಧಾರವನ್ನ ಕೈಗೊಳ್ಳಲಾಗಿದ್ದು, 90 ನಿಮಿಷಗಳ ಕಾಲಾವಕಾಶದಲ್ಲಿ ಬೆಂಗಳೂರು - ಮೈಸೂರು ನಡುವಿನ ಸಂಚಾರ ಅವಧಿ ಇರುವುದರಿಂದ, ವೇಗ ತಲುಪುವ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಸ್ಪಷ್ಟಪಡಿಸಿದರು.
ಸ್ವದೇಶಿ ದರ್ಶನ್ ಯೋಜನೆಗೆ ಮೈಸೂರು ಆಯ್ಕೆ:ಕರ್ನಾಟಕದಿಂದ ಸ್ವದೇಶಿ ದರ್ಶನ್ ಕೇಂದ್ರದ ಯೋಜನೆಗೆ ಮೈಸೂರು ಆಯ್ಕೆ ಆಗಿದ್ದು, ಜೊತೆಗೆ ಹಂಪಿಯು ಆಯ್ಕೆ ಆಗಿದೆ. ಈ ಯೋಜನೆಯಿಂದ ಮೈಸೂರಿನ ಪ್ರವಾಸೋದ್ಯಮ ಅಭಿವೃದ್ಧಿಗೆ ಅನುಕೂಲವಾಗಲಿದ್ದು, ವಸ್ತು ಪ್ರದರ್ಶನ ಆವರಣದಲ್ಲಿ ವರ್ಷ ಪೂರ್ತಿ ಚಟುವಟಿಕೆಗಳು, ವ್ಯಾಪಾರ ವಹಿವಾಟುಗಳು ನಡೆಯಲಿವೆ. ಇದರ ಜೊತೆಗೆ ಕೇಂದ್ರ ಸರ್ಕಾರದ ಪ್ರಸಾದ್ ಯೋಜನೆ ಅಡಿ ಚಾಮುಂಡಿ ಬೆಟ್ಟದ ಅಭಿವೃದ್ಧಿಗೂ ಹಣ ಬಿಡುಗಡೆ ಆಗಿದ್ದು, ಶೀಘ್ರವೇ ಚಾಮುಂಡಿ ಬೆಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ ಎಂದು ಇದೇ ಸಂದರ್ಭದಲ್ಲಿ ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ಇದನ್ನೂ ಓದಿ:ಸ್ವದೇಶ್ ದರ್ಶನ್ ಯೋಜನೆಯಲ್ಲಿ ಮೈಸೂರು ಹಾಗೂ ಹಂಪಿ ಸೇರ್ಪಡೆ