ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂಸವಾರಿಗೆ ದಿನಗಣನೆ ಆರಂಭವಾಗಿದ್ದು, ಇಂದು ಅರಮನೆ ಮುಂಭಾಗದಲ್ಲಿ ಜಂಬೂಸವಾರಿಯ ಅಂತಿಮ ರಿಹರ್ಸಲ್ ನಡೆಯಿತು.
ಅಕ್ಟೋಬರ್ 15 ರಂದು ಜಂಬೂಸವಾರಿ ಜರುಗಲಿದ್ದು, ಅದಕ್ಕೆ ಅರಮನೆ ಮುಂಭಾಗದಲ್ಲಿ ಗಜಪಡೆಗೆ ರಿಹರ್ಸಲ್ ಮಾಡಿಸಲಾಯಿತು. ಚಿನ್ನದ ಅಂಬಾರಿ ಹೊರುವ ಅಭಿಮನ್ಯು ಆನೆಗೆ ಮರದ ಅಂಬಾರಿಯನ್ನು ಹೊರಿಸದೇ ಖಾಲಿಯಾಗಿ ಅರಮನೆ ಮುಂಭಾಗದ ಪುಷ್ಪಾರ್ಚನೆ ಮಾಡುವ ವೇದಿಕೆಯಲ್ಲಿ ನಗರ ಪೊಲೀಸ್ ಕಮೀಷನರ್ ಚಂದ್ರಗುಪ್ತ ಸೇರಿದಂತೆ ಇತರ ಪೊಲೀಸ್ ಅಧಿಕಾರಿಗಳು ಪುಷ್ಪಾರ್ಚನೆ ಮಾಡಿದರು.
ಜಂಬೂಸವಾರಿಯ ದಿನ ಮೆರವಣಿಗೆಯ ದೂರ, ಸಮಯ ಪಾಲನೆ ಸೇರಿದಂತೆ ಈ ರಿಹರ್ಸಲ್ನಲ್ಲಿ ನೌಪತ್ ಆನೆ, ನಿಶಾನೆ ಆನೆ, ಗಾಡಿ ಬಂಡಿ ಎಳೆಯುವ ಆನೆ ಜೊತೆ ಜಂಬೂಸವಾರಿ ಹೊತ್ತ ಅಭಿಮನ್ಯು ಆನೆ, ಅದರ ಜೊತೆ ಕುಮ್ಕಿ ಆನೆಗಳಾದ ಕಾವೇರಿ, ಚೈತ್ರಾ ಆನೆಗಳ ರಿಹರ್ಸಲ್ ನಡೆಯಿತು. ಜೊತೆಗೆ ಪೊಲೀಸ್ ಬ್ಯಾಂಡ್, ಅಶ್ವದಳದ ಪಥಸಂಚಲನ ಹಾಗೂ ಪೊಲೀಸ್ ಪಥಸಂಚಲನ ರಿಹರ್ಸಲ್ ಸಹ ಮಾಡಲಾಯಿತು. ಜೊತೆಗೆ ಜಂಬೂಸವಾರಿಗೆ ಪುಷ್ಪಾರ್ಚನೆ ನಂತರ ಕುಶಾಲತೋಪುಗಳನ್ನು ಸಿಡಿಸುವ ತಾಲೀಮು ಕೂಡ ನಡೆಸಲಾಯಿತು.
ಬಿಗಿ ಪೊಲೀಸ್ ಬಂದೋಬಸ್ತ್:
ವಿಜಯದಶಮಿಯ ದಿನ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಅರಮನೆ ಸುತ್ತಲಿನ ರಸ್ತೆಗಳಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ ಹೇರಲಾಗಿದೆ. ಈ ಬಗ್ಗೆ ಅಧಿಕೃತವಾಗಿ ನಾಳೆ ಆದೇಶ ಹೊರಡಿಸಲಾಗುವುದು. ಸಾರ್ವಜನಿಕರು ಸಾಧ್ಯವಾದಷ್ಟು ಮನೆಯಿಂದಲೇ ಜಂಬೂಸವಾರಿಯನ್ನು ವೀಕ್ಷಣೆ ಮಾಡಬೇಕು. ರಾಜ್ಯ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಭದ್ರತೆಯನ್ನು ಕೈಗೊಳ್ಳಲಾಗಿದ್ದು, ಜಂಬೂಸವಾರಿಯ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ನಗರ ಪೊಲೀಸ್ ಕಮೀಷನರ್ ಡಾ.ಚಂದ್ರಗುಪ್ತ ವಿವರಿಸಿದರು.
ಕೋವಿಡ್ ಪರೀಕ್ಷೆ ಕಡ್ಡಾಯ:
ಜಂಬೂಸವಾರಿಯ ದಿನ ಮೆರವಣಿಗೆಯಲ್ಲಿ ಭಾಗವಹಿಸುವ ಕಲಾ ತಂಡಗಳು, ಮಾಧ್ಯಮಗಳು, ಪೊಲೀಸರು, ಅಧಿಕಾರಿಗಳು ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಗಾಗಿ ನೆಗೆಟಿವ್ ರಿಪೋರ್ಟ್ ತರಬೇಕೆಂದು ತಿಳಿಸಲಾಗಿದೆ.