ಮೈಸೂರು : ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠೆ ನಡೆಯಲಿದೆ. ಈಗಾಗಲೇ ಪ್ರತಿಷ್ಠಾಪನೆ ಮಾಡುವ ಬಾಲರಾಮನ ಮೂರ್ತಿ ಆಯ್ಕೆ ಪ್ರಕ್ರಿಯೆ ಅಂತಿಮಗೊಂಡಿದೆ. ಮೂವರು ಶಿಲ್ಪಿಗಳು ಮೂರು ಬಾಲರಾಮನನ್ನು ಕೆತ್ತಿದ್ದು, ಇದರಲ್ಲಿ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿರುವ ಬಾಲರಾಮನ ಮೂರ್ತಿ ಅಂತಿಮಗೊಂಡಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ರಾಮಲಲ್ಲಾ ಮೂರ್ತಿ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್ ಜೊತೆ ಕಳೆದ ಆರು ತಿಂಗಳಿನಿಂದ ಕೆಲಸದಲ್ಲಿ ಭಾಗಿಯಾಗಿದ್ದ ಮಾವ ಚಲುವರಾಜು ಈಟಿವಿ ಭಾರತ್ ಜೊತೆ ಮಾತನಾಡಿದ್ದಾರೆ.
''ರಾಮಲಲ್ಲಾನ ಮೂರ್ತಿ ಮಾಡಲು ಅವಕಾಶ ಸಿಕ್ಕಿರುವುದು ನಮ್ಮ ಪುಣ್ಯ. ಪ್ರಧಾನಿ ನರೇಂದ್ರ ಮೋದಿಯವರು ಈ ಅವಕಾಶವನ್ನು ಕೊಟ್ಟಿದ್ದಾರೆ. ಕಳೆದ ಆರು ತಿಂಗಳುಗಳ ಕಾಲ ನಾವು ಅರುಣ್ ಜೊತೆಗೂಡಿ ಕೆತ್ತನೆ ಕೆಲಸವನ್ನು ಮಾಡಿದ್ದೇವೆ. ಈಗ ಬಾಲರಾಮನ ಮೂರ್ತಿ ಅದ್ಭುತವಾಗಿ ಮೂಡಿ ಬಂದಿದೆ. ಮತ್ತೊಮ್ಮೆ ಆ ಮೂರ್ತಿಯನ್ನು ನೋಡಬೇಕೆಂದು ಅನಿಸುತ್ತಿದೆ. ಈ ಕೆಲಸದಲ್ಲಿ ಭಾಗಿಯಾಗಿರುವುದು ನಮ್ಮ ಪುಣ್ಯ. ಈ ಸಂಬಂಧ ಪ್ರಧಾನಿ ಮೋದಿಯವರಿಗೆ ಧನ್ಯವಾದ ಅರ್ಪಿಸುತ್ತೇವೆ ಎಂದರು.
51 ಇಂಚು ಎತ್ತರದ ರಾಮಲಲ್ಲಾ ಮೂರ್ತಿ : ನಾವು ಕೆತ್ತನೆ ಮಾಡಿರುವ ಬಾಲರಾಮನ ಮೂರ್ತಿ 51 ಇಂಚು ಎತ್ತರ ಇದೆ. ಮೂರು ಜನ ಶಿಲ್ಪಿಗಳು ಇದೇ ಎತ್ತರದ ಮೂರು ಮೂರ್ತಿಗಳನ್ನು ಕೆತ್ತಿದ್ದಾರೆ. ನಾವು ಮಾಡಿರುವ ಬಾಲರಾಮನಲ್ಲಿ ಜೀವಕಳೆ ಇದೆ. ಬಾಲರಾಮನ ಮೂರ್ತಿಯ ಪಕ್ಕ ಗರುಡ, ಕೆಳಗೆ ನವಗ್ರಹ ಪೀಠ ಇರುತ್ತದೆ ಎಂದು ತಿಳಿಸಿದರು.
ಅರುಣ್ ಅವರು ಬಾಲರಾಮನನ್ನು ನೋಡಿರಲಿಲ್ಲ. ಬಹಳ ತಲೆಕೆಡಿಸಿಕೊಂಡು, ಹಗಲು ರಾತ್ರಿ ಎನ್ನದೇ ಕಷ್ಟಪಟ್ಟು ಮೂರ್ತಿ ನಿರ್ಮಾಣ ಮಾಡಿದ್ದಾರೆ. ಈ ಮೂರ್ತಿ ನಿರ್ಮಾಣ ಮಾಡಲು ಅವರ ಜೊತೆ ಒಟ್ಟು ಏಳು ಜನ ಆರು ತಿಂಗಳ ಕಾಲ ಹಗಲು ರಾತ್ರಿ ಕೆಲಸ ಮಾಡಿದ್ದೇವೆ. ಗರ್ಭಗುಡಿಯಲ್ಲಿ ಕೇವಲ ಬಾಲರಾಮ ಮೂರ್ತಿ ಮಾತ್ರ ಪ್ರತಿಷ್ಠಾಪನೆ ಆಗಲಿದೆ. ಬಾಲರಾಮನ ಮೂರ್ತಿ 51 ಇಂಚು ಎತ್ತರ ಇದೆ. ಇದರ ಹಿಂಭಾಗದ ಪ್ರಭಾವಳಿ ಸೇರಿ ಒಟ್ಟು ಎಂಟು ಅಡಿ ಎತ್ತರ ಇರಲಿದೆ. ಮೂರು ಜನ ಶಿಲ್ಪಿಗಳು ಇದೇ ಎತ್ತರದ ಬಾಲರಾಮನ ಮೂರ್ತಿಯನ್ನು ಮಾಡಿದ್ದಾರೆ. ಇದರಲ್ಲಿ ಒಂದು ಮೂರ್ತಿ ಅಂತಿಮಗೊಂಡಿದೆ ಎಂದು ತಿಳಿಸಿದರು.
ಹೆಚ್ ಡಿ ಕೋಟೆಯ ಕೃಷ್ಣ ಶಿಲೆಯಿಂದ ಮೂಡಿದ ಬಾಲರಾಮ : ಅರುಣ್ ಯೋಗಿರಾಜ್ ಅವರು ರಾಮಲಲ್ಲಾ ಮೂರ್ತಿಯನ್ನು ಹೆಚ್ ಡಿ ಕೋಟೆಯ ಗ್ರಾಮವೊಂದರಲ್ಲಿ ದೊರೆತ ಕೃಷ್ಣ ಶಿಲೆಯಿಂದ ನಿರ್ಮಾಣ ಮಾಡಿದ್ದಾರೆ. ಇದು ಬೇಲೂರು, ಹಳೇಬೀಡಿನಲ್ಲಿ ಕೆತ್ತನೆ ಮಾಡಿರುವ ಕಲ್ಲಿನ ಮಾದರಿಯಾಗಿದೆ. ದಿನ ಕಳೆದಂತೆ ಈ ಮೂರ್ತಿ ಗಟ್ಟಿಯಾಗುತ್ತದೆ. ನೂರಾರು ವರ್ಷಗಳ ಕಾಲ ಬಾಳಿಕೆ ಬರುತ್ತದೆ. ಈಗ ಅರುಣ್ ಯೋಗಿರಾಜ್ ಜೊತೆ ತೋರಿಸಲಾಗುತ್ತಿರುವ ರಾಮ, ಲಕ್ಷ್ಮಣ, ಸೀತೆ, ಆಂಜನೇಯ ಮೂರ್ತಿಗಳು ಅಲ್ಲಿ ಪ್ರತಿಷ್ಠಾಪನೆ ಆಗುವುದಿಲ್ಲ. ಅಲ್ಲಿ ಕೇವಲ ರಾಮಲಲ್ಲಾ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಅರುಣ್ ಸೇರಿದಂತೆ ನಾವೆಲ್ಲರೂ ಕೆತ್ತನೆ ಕೆಲಸ ಮುಗಿದ ಮೇಲೆ ಮೈಸೂರಿಗೆ ವಾಪಸ್ ಆಗಿದ್ದೆವು. ಅರುಣ್ ಅವರು ಮತ್ತೆ ಅಯೋಧ್ಯೆಗೆ ತೆರಳಿದ್ದಾರೆ. ರಾಮಲಲ್ಲಾ ಮೂರ್ತಿ ಚೆನ್ನಾಗಿ ಮೂಡಿ ಬಂದಿದೆ ಎಂದು ಅರುಣ್ ಮಾವ ಚಲುವರಾಜು ಸಂತೋಷ ವ್ಯಕ್ತಪಡಿಸಿದರು.
ಇದನ್ನೂ ಓದಿ : ರಾಮಲಲ್ಲಾ ಮೂರ್ತಿ ಆಯ್ಕೆಯಾದರೆ ಅದು ನಮ್ಮ ಪುಣ್ಯ : ಶಿಲ್ಪಿ ಅರುಣ್ ಯೋಗಿರಾಜ್ ಪತ್ನಿ ಮತ್ತು ತಾಯಿಯ ಸಂದರ್ಶನ