ಮೈಸೂರು: ಒಂಭತ್ತು ತಿಂಗಳ ನಂತರ ರೈಲುಗಳ ಸಂಚಾರ ಆರಂಭವಾಗಿದ್ದು, ಪ್ರಯಾಣಿಕರು ರೈಲ್ವೆ ನಿಲ್ದಾಣದ ಕಡೆ ಮುಖ ಮಾಡಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಮೈಸೂರು ರೈಲ್ವೆ ನಿಲ್ದಾಣದಿಂದ ಬೇರೆ ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಗೆ ರೈಲುಗಳ ಸಂಚಾರ ಸಂಪೂರ್ಣವಾಗಿ ನಿಷೇಧಿಸಲಾಗಿತ್ತು.
ಕೆಲ ದಿನಗಳ ಹಿಂದೆ ಬೆಂಗಳೂರು ಹಾಗೂ ಮೈಸೂರು ನಡುವೆ ಮಾತ್ರ ಎರಡು ರೈಲುಗಳ ಸಂಚಾರಕ್ಕೆ ಅನುಮತಿ ನೀಡಲಾಗಿತ್ತು. ಆದರೆ ಇಂದಿನಿಂದ ಮೈಸೂರು ರೈಲ್ವೆ ನಿಲ್ದಾಣದಿಂದ ಬೆಂಗಳೂರು, ಹಾಸನ, ಬಾಗಲಕೋಟೆ, ಚಾಮರಾಜನಗರ, ಧಾರಾವಾಡ, ಬಂಗಾರಪೇಟೆ, ತಾಳಗುಪ್ಪ ರೈಲು ನಿಲ್ದಾಣಗಳವರೆಗೆ ರೈಲುಗಳ ಸಂಚಾರ ಆರಂಭವಾಗಿದೆ.
ಬಸ್ಗಳ ಮೂಲಕ ತಮ್ಮ ಜಿಲ್ಲೆಗಳಿಗೆ ತೆರಳಬೇಕಾದರೆ ದುಬಾರಿ ಹಣ ನೀಡಬೇಕಾಗುತ್ತಿತ್ತು. ಅಲ್ಲದೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟವಾಗುತ್ತಿತ್ತು. ಆದರೆ ಹಲವು ಜಿಲ್ಲೆಗಳಿಗೆ ರೈಲುಗಳ ಸಂಚಾರ ಇಂದಿನಿಂದ ಆರಂಭವಾಗಿರುವುದರಿಂದ ಆಯಾಯ ಜಿಲ್ಲೆಗಳಿಗೆ ತೆರಳಲು ಪ್ರಯಾಣಿಕರಿಗೆ ಸಹಾಯವಾಗಲಿದೆ. ಅಲ್ಲದೆ ರೈಲಿನಲ್ಲಿ ಮದ್ದೂರು ವಡೆ, ಹೂ, ಟೀ-ಕಾಫಿ ಸೇರಿದಂತೆ ಇತರೆ ಕುರುಕಲು ತಿಂಡಿ ಮಾರಾಟ ಮಾಡುವ ವ್ಯಾಪಾರಿಗಳಿಗೂ ಅನುಕೂಲವಾಗಲಿದೆ.