ಕೊಳ್ಳೇಗಾಲ: ಶಾಸಕ ಎನ್.ಮಹೇಶ್ ಬಹುಜನ ಸಮಾಜವಾದಿ ಪಕ್ಷ (ಬಿಎಸ್ಪಿ)ದಿಂದ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಸೇರ್ಪಡೆಯಾಗಿರುವುದರಿಂದ ಅವರ ನೈತಿಕೆ ಬಗ್ಗೆ ಪ್ರಶ್ನೆ ಮಾಡಲಾಗ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವ ನಾರಾಯಣ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿದ್ದರು. ಮಂತ್ರಿ ಮಂಡಲದಿಂದ ಅವರನ್ನು ತೆಗೆದು ಹಾಕಿದಾಗ ಕೋಪಗೊಂಡು ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದರು. ಬಳಿಕ ಟಿಕೆಟ್ ಪಡೆದು ನಂಜನಗೂಡು ವಿಧಾನಸಬಾ ಕ್ಷೇತ್ರದಲ್ಲಿ ಸ್ಪರ್ದಿಸಿದ್ದರು ಎಂದು ತಿಳಿಸಿದರು.
ಇದನ್ನೂ ಓದಿ: ಸಿ ಟಿ ರವಿಯೊಬ್ಬ ಕುಡುಕ, ವ್ಯಭಿಚಾರಿ : ಆರ್ ಧ್ರುವನಾರಾಯಣ್ ವಾಗ್ದಾಳಿ
ಜೆಡಿಎಸ್ನ ಮೂವರು ಶಾಸಕರು, ಕಾಂಗ್ರೆಸ್ನ 13 ಶಾಸಕರು ಬಿಜೆಪಿ ಸೇರುವ ಸಮಯದಲ್ಲಿ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಸೇರ್ಪಡೆಯಾಗಿದ್ದಾರೆ. ಬಳಿಕ ಚುನಾವಣೆಗೆ ಸ್ಪರ್ಧಿಸಿದ್ದರು. ಇದು ಎನ್. ಮಹೇಶ್ ಅವರಿಗೂ ಅನ್ವಯಿಸುತ್ತದೆ ಎಂದರು.
ಆನೆ ಚಿಹ್ನೆಯ ಪಕ್ಷದಿಂದ ಗೆದ್ದು ಬಿಜೆಪಿ ಸೇರಿರುವುದರಿಂದ ಅವರ ನೈತಿಕತೆಯ ಬಗ್ಗೆ ಪ್ರಶ್ನೆ ಉದ್ಭವಿಸುತ್ತದೆ. ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಮುಂದಿನ ಚುನಾವಣೆಯಲ್ಲೂ ಬಿಜೆಪಿ ಗೆಲ್ಲುತ್ತದೆ ಎಂಬ ವಿಶ್ವಾಸವನ್ನು ಮಾಧ್ಯಮಗಳಲ್ಲಿ ಎನ್.ಮಹೇಶ್ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿಯಿಂದ ನಿಂತು ಗೆಲ್ಲಲಿ ಎಂದು ಹೇಳಿದರು.