ಮೈಸೂರು: ಬಿಜೆಪಿ ಸೇಡಿನ ರಾಜಕಾರಣ ಮಾಡುತ್ತಿರವ ಕಾರಣಕ್ಕೆ ದೇಶವ್ಯಾಪಿ ಕಾಂಗ್ರೆಸ್ ಪ್ರತಿಭಟನೆಗಳನ್ನು ಮಾಡುತ್ತಿದೆ. ಪೊಲೀಸರ ದೌರ್ಜನ್ಯ ಮಿತಿ ಮೀರಿದೆ ಎಂದು ಆರ್.ಧ್ರುವನಾರಾಯಣ್ ಆರೋಪಿಸಿದರು.
ನ್ಯಾಷನಲ್ ಹೆರಾಲ್ಡ್ ಪತ್ರಿಕೆ ನಿರ್ವಹಣೆಗೆ ಕ್ರಮೇಣ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಾಲ ನೀಡಿದೆ. 90 ಕೋಟಿ ಹಣದಲ್ಲಿ 67 ಕೋಟಿ ರೂ.ಗಳನ್ನು ಉದ್ಯೋಗಿಗಳ ವೇತನ, ವಿಆರ್‌ಎಸ್‌ಗೆ ಬಳಸಿಕೊಳ್ಳಲಾಗಿದೆ. ಉಳಿದ ಹಣವನ್ನು ವಿದ್ಯುತ್ ಶುಲ್ಕ, ತೆರಿಗೆ, ಬಾಡಿಗೆ, ಕಟ್ಟಡ ವೆಚ್ಚಕ್ಕೆ ಬಳಸಲಾಗಿದೆ. ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಯಾರೂ ದುರ್ಬಳಕೆ ಮಾಡಿಕೊಂಡಿಲ್ಲ. ಹೆರಾಲ್ಡ್ ಆಸ್ತಿ ಹಾಗೆಯೇ ಉಳಿದಿದೆ. ಆದರೆ ಸಾಲ ನೀಡಿರುವುದನ್ನೇ ಅಪರಾಧ ಎಂಬ ರೀತಿಯಲ್ಲಿ ಬಿಜೆಪಿ ಬಿಂಬಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ವಿರುದ್ದ ಪ್ರತಾಪ್‌ಸಿಂಹ ವಾಗ್ದಾಳಿ ವಿಚಾರವಾಗಿ ಮಾತನಾಡಿ, ನೈತಿಕತೆ ಇದ್ರೆ ಒಳ್ಳೆಯ ಕೆಲಸ ಮಾಡಿ. ಉದ್ಧಟತನದ ಮಾತು ನಿಮ್ಮ ಘನತೆಗೆ ಶೋಭೆ ತರಲ್ಲ ಎಂದರು. ಮೋದಿ ಕಾರ್ಯಕ್ರಮದ ವೇದಿಕೆಯಿಂದ ಪ್ರತಾಪ್‌ಸಿಂಹ, ರಾಮದಾಸ್‌ಗೆ ಗೇಟ್‌ಪಾಸ್ ವಿಚಾರವಾಗಿ ಮಾತನಾಡಿ, ಸಹಜವಾಗಿ ಪ್ರಧಾನಿಗಳು ಬಂದಾಗ ಆಯಾ ಸಂಸದರು ವೇದಿಕೆಯಲ್ಲಿರುತ್ತಾರೆ. ಆದರೆ ಇವರಿಬ್ಬರ ಕಚ್ಚಾಟದಿಂದ ಅವಕಾಶ ನೀಡಿಲ್ಲ. ಆಂತರಿಕ ಕಚ್ಚಾಟದಿಂದ ಮೈಸೂರಿಗೆ ಅಗೌರವ ತಂದಿದ್ದಾರೆ ಎಂದರು.
ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಹೊಸ ಇತಿಹಾಸ ನಿರ್ಮಾಣ ಮಾಡಿದೆ. ಈವರೆಗೂ ಕಾಂಗ್ರೆಸ್‌ನಿಂದ ಯಾರೂ ಗೆದ್ದಿರಲಿಲ್ಲ. ಪದವೀಧರರು ಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿಯ ಮೌಲ್ಯಮಾಪನ ಮಾಡಿದ್ದಾರೆ. ಸಂಘಟಿತ ಹೋರಾಟದಿಂದ ನಾವು ಗೆದ್ದಿದ್ದೇವೆ. ಜೆಡಿಎಸ್‌ನ ಮರಿತಿಬ್ಬೇಗೌಡರ ಬೆಂಬಲ ಕೂಡ ಮುಖ್ಯ ಎಂದು ಹೇಳಿದರು.
ಇದನ್ನೂ ಓದಿ: ದ.ಪದವೀಧರ ಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿ ಮಧು ಜಿ.ಮಾದೇಗೌಡ ಜಯಭೇರಿ
ಕಾಂಗ್ರೆಸ್ ಪ್ರತಿಭಟನೆಯಿಂದ ಕೋವಿಡ್ ಹೆಚ್ಚಾಗುತ್ತದೆ ಎಂದು ಆರೋಗ್ಯ ಸಚಿವರು ಹೇಳ್ತಾರೆ, ಪ್ರಧಾನಿ ಮೋದಿ ನಿಲ್ಲಿಸಿಕೊಂಡು ಯೋಗ ಮಾಡಿದ್ರೆ ಕೋವಿಡ್ ಬರೋದಿಲ್ವೇ ಎಂದು ಪ್ರಶ್ನಿಸಿದರು.