ಮೈಸೂರು: ಇನ್ನೂ ಎರಡೂವರೆ ವರ್ಷ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಇರುತ್ತಾರೆ. ಯಾವುದೇ ತಪ್ಪಿಲ್ಲದೇ ಅವರನ್ನು ತೆಗೆಯುವುದು ಸರಿಯಲ್ಲ ಎಂಬುದು ನನ್ನ ಅಭಿಪ್ರಾಯ ಎಂದು ಕಂದಾಯ ಸಚಿವ ಆರ್.ಅಶೋಕ್ ಮೈಸೂರಿನಲ್ಲಿ ಹೇಳಿದ್ದಾರೆ.
ಇಂದು ನಗರದ ಹೊರವಲಯದಲ್ಲಿರುವ ಖಾಸಗಿ ರೆಸಾರ್ಟ್ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಯಡಿಯೂರಪ್ಪ ಈಗಾಗಲೇ ಸಿಎಂ ಆಗಿದ್ದಾರೆ, ನಮ್ಮ ಕೇಂದ್ರದ ನಾಯಕರು ಸಿಎಂ ಆಗಲು ಅವರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಅವರೇ ಎರಡೂವರೆ ವರ್ಷಗಳ ಕಾಲ ಸಿಎಂ ಆಗಿ ಇರಬೇಕು, ಪ್ರವಾಹ ಸಂದರ್ಭದಲ್ಲಿ ಕೋವಿಡ್ ಸಂದರ್ಭದಲ್ಲಿ ಅಷ್ಟು ವಯಸ್ಸಾಗಿದ್ದರೂ ಯುವಕರು ನಾಚಿಸುವ ರೀತಿಯಲ್ಲಿ ಓಡಾಡಿದ್ದಾರೆ ಎಂದರು.
ಸಂತೋಷ್ ಆತ್ಮಹತ್ಯೆ ಯತ್ನ ವಿಚಾರದಲ್ಲಿ ಸಿ.ಡಿ ಇದೆ ಎಂದು ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅಶೋಕ್, ಡಿ.ಕೆ.ಶಿವಕುಮಾರ್ ಗಾಳಿಯಲ್ಲಿ ಗುಂಡು ಹೊಡೆಯುತ್ತಿದ್ದಾರೆ. ಉಪ ಚುನಾವಣೆ ಸೋಲಿನ ನಂತರ ಅವರಿಗೆ ಅಸ್ತಿತ್ವದ ಪ್ರಶ್ನೆ ಕಾಡುತ್ತಿದ್ದು, ಅದಕ್ಕಾಗಿ ಅವರು ಈ ವಿಚಾರವನ್ನು ರಾಜಕೀಯಗೊಳಿಸುತ್ತಿದ್ದಾರೆ. ಸಂತೋಷ್ ಮರೆವಿನಿಂದ ನಿದ್ರೆ ಮಾತ್ರೆ ನುಂಗಿರಬಹುದು, ಈಗ ಅವರು ಚೇತರಿಸಿಕೊಳ್ಳುತ್ತಿದ್ದು, ಅವರಿಂದ ಹೇಳಿಕೆ ಪಡೆದರೆ ವಿಚಾರ ಗೊತ್ತಾಗಲಿದೆ ಎಂದರು.
ಇನ್ನು ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿ, ಮುನಿರತ್ನ, ಎಮ್ಟಿಬಿ ನಾಗರಾಜ್, ಶಂಕರ್ ಸೇರಿದಂತೆ ಹಲವರ ತ್ಯಾಗದಿಂದ ಸರ್ಕಾರ ಬಂದಿದೆ. ಅವರನ್ನು ಮಂತ್ರಿ ಮಾಡಬೇಕು, ಮಂತ್ರಿ ಮಾಡಲು ಕೇಂದ್ರದ ತೀರ್ಮಾನ ಆಗಬೇಕು, ಆ ತೀರ್ಮಾನದ ನಿರೀಕ್ಷೆಯಲ್ಲಿ ನಾವೆಲ್ಲ ಇದ್ದೇವೆ ಎಂದರು.