ಮೈಸೂರು: ಜಿಲ್ಲೆಯಾದ್ಯಂತ ಇಂದಿನಿಂದ ಮಾ. 23 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದೆ. ಪರೀಕ್ಷೆಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಸಂಪೂರ್ಣ ಸಿದ್ಧತೆ ಕೈಗೊಂಡಿದೆ. ಈ ಬಾರಿ ಒಟ್ಟು 35,004 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಇದರಲ್ಲಿ 28,813 ಹೊಸ ವಿದ್ಯಾರ್ಥಿಗಳು, 4,668 ರಿಪೀಟರ್ಸ್, 1,523 ಖಾಸಗಿ ಅಭ್ಯರ್ಥಿಗಳು ಕೂಡ ಪರೀಕ್ಷೆ ಬರೆಯಲಿದ್ದಾರೆ.
ಈ ಪೈಕಿ 17,226 ಬಾಲಕರು, 17,738 ಬಾಲಕಿಯರು ಇದ್ದಾರೆ. ಜಿಲ್ಲೆಯಲ್ಲಿ ಒಟ್ಟು 50 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ನಗರದಲ್ಲಿ 26 ಮತ್ತು ಗ್ರಾಮಾಂತರದಲ್ಲಿ 24 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಪರೀಕ್ಷಾ ಅಕ್ರಮಗಳನ್ನು ತಡೆಯಲು ಈ ಬಾರಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ಪ್ರಶ್ನೆ ಪತ್ರಿಕೆಗಳನ್ನು ಕೊಂಡೊಯ್ಯಲು 10 ಮಾರ್ಗಗಳನ್ನು ಗುರುತಿಸಲಾಗಿದೆ.
ಪ್ರತಿದಿನ ಬೆಳಗಿನ ಜಾವ ಮೈಸೂರಿನಿಂದ 50 ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆ ಪೂರೈಕೆಯಾಗಲಿದೆ. ಜಿಲ್ಲಾ ಕೇಂದ್ರದಲ್ಲಿ ತೆರೆದಿರುವ ಕಂಟ್ರೋಲ್‌ರೂಂ ಹಾಗೂ ಪರೀಕ್ಷಾ ಕೇಂದ್ರದಲ್ಲಿ ತೆರೆದಿರುವ ಕಂಟ್ರೋಲ್‌ರೂಂನಲ್ಲೂ ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ಸಿಸಿ ಕ್ಯಾಮರಾ ಮಾತ್ರವಲ್ಲದೆ ಪರೀಕ್ಷಾ ಅಕ್ರಮ ತಡೆಯಲು ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಸಿಬ್ಬಂದಿ ನಿಯೋಜಿಸಲಾಗಿದ್ದು, ಇವರನ್ನು ಪ್ರತಿ ಮೂರು ದಿನಕ್ಕೊಮ್ಮೆ ಪಕ್ಕದ ಪರೀಕ್ಷಾ ಕೇಂದ್ರಕ್ಕೆ ವರ್ಗಾವಣೆ ಮಾಡಲಾಗುತ್ತದೆಯಲ್ಲದೆ ತಾಲೂಕು ಮತ್ತು ಜಿಲ್ಲಾಮಟ್ಟದ ಜಾಗೃತ ದಳ ರಚಿಸಲಾಗಿದೆ.
ಸ್ಮಾರ್ಟ್ ಫೋನ್‌ಗೆ ಕಡಿವಾಣ:
ಪರೀಕ್ಷಾ ಕೇಂದ್ರಗಳಿಗೆ ಸ್ಮಾರ್ಟ್ ಫೋನ್‌ಗಳನ್ನು ಕೊಂಡೊಯ್ಯಲು ಪರೀಕ್ಷಾ ಸಿಬ್ಬಂದಿಗೆ ಅವಕಾಶ ಇತ್ತು. ಆದರೆ, ಪ್ರಥಮ ಬಾರಿಗೆ ಇದಕ್ಕೆ ಕಡಿವಾಣ ಹಾಕಲಾಗಿದ್ದು, ಬೇಸಿಕ್ ಸೆಟ್ನನ್ನು ಮಾತ್ರ ಕೊಂಡೊಯ್ಯಲು ಅವಕಾಶ ನೀಡಲಾಗಿದೆ. ಒಂದು ವೇಳೆ ಸ್ಮಾರ್ಟ್‌ಫೋನ್ ತಂದರೂ ಪರೀಕ್ಷಾ ಮುಖ್ಯಸ್ಥರ ಬಳಿ ನೀಡಬೇಕು. ಪರೀಕ್ಷಾ ಮುಖ್ಯಸ್ಥರು ಸಹ ಸ್ಮಾರ್ಟ್‌ಫೋನ್ ಬಳಕೆ ಮಾಡುವಂತಿಲ್ಲ. ಒಂದು ವೇಳೆ ಬಳಕೆ ಮಾಡಿದರೆ ಸೈಬರ್ ಕ್ರೈಂನಡಿ ಪ್ರಕರಣ ದಾಖಲಿಸಿ 5 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶ ಇದೆ.