ಮೈಸೂರು: ಕೊರೊನಾ ಎರಡನೇ ಅಲೆ ಹೆಚ್ಚಾಗುತ್ತಿದ್ದು ಸಾರ್ವಜನಿಕರು ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲಿಸಬೇಕೆಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಆದೇಶಿಸಿದ್ದಾರೆ.
ಮೈಸೂರು ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಪ್ರತಿಯೊಬ್ಬರು ಮಾಸ್ಕ್ ಧರಿಸುವುದು ಹಾಗೂ ದೈಹಿಕ ಅಂತರ ಕಾಪಾಡುವುದನ್ನು ಕಡ್ಡಾಯವಾಗಿ ಪಾಲಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿಯೂ ಪ್ರಕರಣಗಳು ಹೆಚ್ಚು ದಾಖಲಾಗುತ್ತಿದ್ದು, ಜನರು ಈ ಸಾಂಕ್ರಾಮಿಕವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ನಿರ್ಲಕ್ಷಿಸದೆ, ನಿಯಮಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ.
ಯಾವುದೇ ಜ್ವರ, ಕೆಮ್ಮು, ಶೀತ, ತಲೆನೋವಿನಂತಹ ಕೋವಿಡ್-19 ರೋಗದ ಗುಣಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಇದಲ್ಲದೆ 60 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರು ಹಾಗೂ ಯಾವುದಾದರೂ ದೀರ್ಘಕಾಲಿನ ಕಾಯಿಲೆಗಳಿಂದ (comorbidities) ಬಳಲುತ್ತಿರುವ 45 ರಿಂದ 60 ವರ್ಷ ವಯೋಮಾನದವರು ಕಡ್ಡಾಯವಾಗಿ ಲಸಿಕೆಯನ್ನು ಪಡೆದುಕೊಳ್ಳಬೇಕು. ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳಿಗೆ, ದೇವಸ್ಥಾನಗಳಿಗೆ, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ಕೋವಿಡ್-19 ಹರಡದಂತೆ ತಡೆಗಟ್ಟಲು ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಜಾರಿ ಮಾಡಿರುವ ಹೊಸ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು.
ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದ ಪ್ರಕರಣ.. ವಿಚಾರಣೆಗೆ ಹಾಜರಾದ ಕಾರ್ಯಕರ್ತರು
ಮದುವೆ, ಸಭೆ ಸಮಾರಂಭಗಳು, ಜಾತ್ರೆ-ಉತ್ಸವಗಳು ಇಂತಹ ಕಾರ್ಯಕ್ರಮಗಳಲ್ಲಿ (superspreader event) ಹಾಗೂ ಜನಸಂದಣಿ ಪ್ರದೇಶಗಳಲ್ಲಿ ಸಾವಿರಾರು ಜನರು ಬಂದು-ಹೋಗುವುದರಿಂದ ಕೋವಿಡ್ ಬಹುಬೇಗ ವ್ಯಾಪಕವಾಗಿ ಹರಡುತ್ತದೆ. ಆದ್ದರಿಂದ ಇಂತಹ ಜನಸಂದಣಿ ಪ್ರದೇಶಗಳಿಂದ ದೂರ ಇರಬೇಕಾಗಿದೆ.
ಕಳೆದ 2020ರ ಜುಲೈ ತಿಂಗಳಲ್ಲಿ ಮೈಸೂರು ನಗರದಲ್ಲಿ ಇದ್ದಂತಹ ಕೋವಿಡ್-19 ಪರಿಸ್ಥಿತಿ ಈಗ ಮರುಕಳಿಸಿದೆ. ಕಳೆದ 2021ರ ಫೆಬ್ರವರಿ 26 ರಿಂದ ಮಾರ್ಚ್ 4ರ ಅವಧಿಯಲ್ಲಿ ಮೈಸೂರಲ್ಲಿ 127 ಪ್ರಕರಣಗಳು ದಾಖಲಾಗಿದ್ದವು. ಮಾರ್ಚ್ 5ರಿಂದ ಮಾರ್ಚ್ 11ರ ಅವಧಿಯಲ್ಲಿ ಈ ಪ್ರಕರಣ 185ಕ್ಕೆ ಏರಿಕೆಯಾಗಿದೆ. ಈ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದ್ದು, ಸೋಂಕು ನಿಯಂತ್ರಣಕ್ಕೆ ಎಲ್ಲರೂ ಜಾಗೃತಿ ವಹಿಸಬೇಕಾಗಿದೆ.
ಕರ್ನಾಟಕದಲ್ಲಿ ಕುಲಬುರಗಿ, ಬೀದರ್, ಮತ್ತು ಬೆಂಗಳೂರು ನಗರ ಜಿಲ್ಲೆಯಲ್ಲಿ ಈಗಾಗಲೇ ಕೋವಿಡ್-19 ಪ್ರಕರಣಗಳು ತುಂಬಾ ಏರುಗತಿಯಲ್ಲಿ ಇವೆ. ಮೈಸೂರಿಗೆ ಅಂತಹ ಪರಿಸ್ಥಿತಿ ಬರದಂತೆ ನಿಯಂತ್ರಣ ಮಾಡುವುದಕ್ಕೆ ಸಾರ್ವಜನಿಕರ ಸಹಕಾರ ಬೇಕಾಗಿದೆ. ಪರಿಸ್ಥಿತಿ ಗಂಭೀರ ಹಂತ ತಲುಪುವ ಮೊದಲೇ ಸಾರ್ವಜನಿಕರು ಎಚ್ಚರಿಕೆ ವಹಿಸುವ ಮೂಲಕ ಸೋಂಕು ಹರಡದಂತೆ ತಡೆಗಟ್ಟಬೇಕಿದೆ.
ಮೈಸೂರಿನ ಪ್ರಜ್ಞಾವಂತ ನಾಗರಿಕರ ಸಹಕಾರದಿಂದಾಗಿ ಕಳೆದ ವರ್ಷ ಜಿಲ್ಲಾದ್ಯಾಂತ ಸೋಂಕು ನಿಯಂತ್ರಿಸಲು ಸಾಧ್ಯವಾಗಿತ್ತು. ಅದರಂತೆ ಈ ಬಾರಿಯೂ ಕೂಡ ಸಾರ್ವಜನಿಕರ ಸಹಕಾರ ಅಗತ್ಯವಾಗಿದ್ದು, ಸರ್ಕಾರ ಇತ್ತೀಚಿಗೆ ಹೊರಡಿಸಿದ ಕೋವಿಡ್-19ರ ನಿಯಮಗಳನ್ನು ಪಾಲಿಸಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಿ, ದೈಹಿಕ ಅಂತರ ಕಾಪಾಡಿಕೊಂಡು ಸಹಕಾರ ನೀಡುವಂತೆ ಕೋರಿದೆ.