ಮೈಸೂರು: ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘ ಮತ್ತು ಇತರ ರೈತ ಸಂಘಟನೆಗಳು 'ನಮ್ಮೂರ ಭೂಮಿ ನಮಗಿರಲಿ ಅನ್ಯರಿಗಲ್ಲ' ಎಂಬ ನೂತನ ಪರಿಕಲ್ಪನೆಯೊಂದಿಗೆ ಪ್ರತಿಭಟನೆ ನಡೆಸಿದರು.
ಇಂದು ನಗರದ ದೇವೇಗೌಡ ವೃತ್ತದ ಬಳಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘ ಮತ್ತು ಇತರ ರೈತ ಸಂಘಟನೆಗಳು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ, ನಮ್ಮೂರ ಭೂಮಿ ನಮಗಿರಲಿ ಅನ್ಯರಿಗಲ್ಲ, ಎಂದು ಭಿತ್ತಿ ಪತ್ರ ಹಿಡಿದು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರ ಈ ಕಾಯ್ದೆ ಮೂಲಕ ಉದ್ಯಮಿಗಳಿಗೆ ಭೂಮಿಯನ್ನು ಕೊಳ್ಳಲು ಅವಕಾಶ ಮಾಡಿಕೊಟ್ಟು ರೈತರನ್ನು ಭೂಮಿ ಕಳೆದುಕೊಳ್ಳುವ ಪರಿಸ್ಥಿತಿಗೆ ತಂದು ನಿಲ್ಲಿಸಲಿದೆ. ಆದ್ದರಿಂದ ಈ ಹೋರಾಟವನ್ನು ನಡೆಸಲಾಗುತ್ತಿದೆ. ಇದರಿಂದ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಆಗಸ್ಟ್ 8 ರಂದು ನ್ಯಾಯಾಲಯದ ಮುಂದೆ, ಆಗಸ್ಟ್ 15 ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಕರಾಳ ದಿನ ಆಚರಿಸಲಾಗುವುದೆಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದರು.