ಮೈಸೂರು: ಜೆಎನ್ಯು ವಿವಿಯಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಮೇಲೆ ನಡೆದ ಹಲ್ಲೆ ಖಂಡಿಸಿ ಎಐಡಿಎಸ್ಒ, ಎಸ್ಎಫ್ಐ ಸೇರಿದಂತೆ ಪ್ರಗತಿಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ನಗರದ ರಾಮಸ್ವಾಮಿ ವೃತ್ತದ ಬಳಿ ಜಮಾಯಿಸಿದ ಪ್ರತಿಭಟನಾಕಾರರು ಜೆಎನ್ಯು ಘಟನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜೆಎನ್ಯು ವಿಶ್ವವಿದ್ಯಾಯಲದಲ್ಲಿ ಹೊರಗಿನಿಂದ ಬಂದ ಕಿಡಿಗೇಡಿಗಳು ವಿದ್ಯಾರ್ಥಿಗಳ ಮೇಲೆ ಹಲ್ಲೆನಡೆಸಿದ್ದಾರೆ. ಕ್ಯಾಂಪಸ್ನಲ್ಲಿರುವ ಹಾಸ್ಟೆಲ್ಗಳಿಗೆ ಮತ್ತು ವಿದ್ಯಾರ್ಥಿಗಳು ಸೇರುವ ಸ್ಥಳಗಳಲ್ಲಿ ಸಿಕ್ಕ ಸಿಕ್ಕವರನ್ನು ಅದರಲ್ಲೂ ಜೆಎನ್ಯು ಶುಲ್ಕ ಹೆಚ್ಚಳ ವಿರೋಧಿಸುತ್ತಿರುವ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಮನಬಂದಂತೆ ದಾಳಿ ಮಾಡಿದ್ದಾರೆ ಎಂದು ಕಿಡಿಕಾರಿದರು.
ಈ ಘಟನೆಯಲ್ಲಿ ಜೆಎನ್ಯು, ಎಸ್ಯು ಅಧ್ಯಕ್ಷೆ ಸೇರಿದಂತೆ ಹಲವಾರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದು, ಶಿಕ್ಷಕರ ಮೇಲೂ ದಾಳಿ ನಡೆಸಿದ್ದಾರೆ. ಗೂಂಡಾಗಿರಿ ನಡೆಸಿರುವವರ ಮೇಲೆ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.