ಮೈಸೂರು: ರಾಜ್ಯ ಸರ್ಕಾರ ಕೆಎಎಸ್ ಪೂರ್ವಭಾವಿ ಪರೀಕ್ಷೆಯನ್ನು ಮುಂದೂಡಬೇಕೆಂದು ಆಗ್ರಹಿಸಿ ರಾಜ್ಯ ಹಿಂದುಳಿದ ವರ್ಗಗಳ ವೇದಿಕೆ ವತಿಯಿಂದ ಮೈಸೂರು ಮಹಾನಗರ ಪಾಲಿಕೆ ಮುಂಭಾಗ ಅಂಚೆ ಚಳುವಳಿ ನಡೆಸಲಾಯಿತು.
ಕೊರೊನಾ ಮತ್ತು ಪ್ರವಾಹ ಸಂಕಷ್ಟದ ನಡುವೆ ಪರೀಕ್ಷೆ ನಡೆಸುತ್ತಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಪೂರ್ವಗ್ರಹ ಪೀಡಿತರಾಗಿ ಕೇವಲ ಹಣ ಮಾಡುವ ಸಲುವಾಗಿ ಪರೀಕ್ಷೆಯನ್ನು ನಡೆಸಲು ಕರ್ನಾಟಕ ಲೋಕಸೇವಾ ಆಯೋಗ ಮುಂದಾಗಿದೆ. ಈ ಪರೀಕ್ಷೆಯನ್ನು 5 ಲಕ್ಷ ವಿದ್ಯಾರ್ಥಿಗಳು ಬರೆಯಲಿದ್ದಾರೆ. ಜೊತೆಗೆ ಕೊರೊನಾ ವಾರಿಯರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ನೌಕರರೂ ಪರೀಕ್ಷೆ ಬರೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೆಎಎಸ್ ಪರೀಕ್ಷೆ ಮಾಡದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಂಚೆ ಚಳುವಳಿ ಮೂಲಕ ಒತ್ತಾಯಿಸಿದರು.
ಕೊರೊನಾ ಸಂದರ್ಭ ಪರೀಕ್ಷಾರ್ಥಿಗಳ ಪ್ರಾಣವನ್ನು ಪಣಕ್ಕಿಟ್ಟು ಪರೀಕ್ಷೆ ನಡೆಸುವ ಹುನ್ನಾರವೇನು?, ರಾಜ್ಯ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಪರೀಕ್ಷೆಯನ್ನು ಮುಂದೂಡಬೇಕು ಎಂದು ಆಗ್ರಹಿಸಿದರು.