ಮೈಸೂರು : ಕೋವಿಡ್ ಭಯದಿಂದ ಖಾಸಗಿ ಆಸ್ಪತ್ರೆಗಳು ಇತರ ರೋಗಿಗಳಿಗೆ ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತಿವೆ. ಇದರಿಂದ ಸಕಾಲಕ್ಕೆ ಚಿಕಿತ್ಸೆ ಸಿಗದೆ ಜನ ಸಾಯುತ್ತಿರುವ ಘಟನೆಗಳು ಪ್ರತಿದಿನ ನಡೆಯುತ್ತಿವೆ.
ಖಾಸಗಿ ಆಸ್ಪತ್ರೆಗಳು ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಬೇಕು. ಶೇ.50ರಷ್ಟು ಬೆಡ್ ಮೀಸಲಿಡಬೇಕು. ಚಿಕಿತ್ಸೆ ನೀಡಲು ತಾತ್ಸಾರ ಮಾಡಿದರೆ ಅಂತಹ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಆದೇಶ ನೀಡಿದೆ. ಹೀಗಾಗಿ, ಕೋವಿಡ್ ಅಲ್ಲದ ರೋಗಿಗಳು ಚಿಕಿತ್ಸೆಗೆ ತೆರಳಿದ್ರೆ, ಬೆಡ್, ಸಿಬ್ಬಂದಿ ಕೊರತೆಯ ನೆಪವೊಡ್ಡಿ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳು ಹಿಂದೇಟು ಹಾಕುತ್ತಿವೆ. ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ಇದೇ ರೀತಿಯ ಪರಿಸ್ಥಿತಿಯಿದೆ. ಹೀಗಾಗಿ ಕೋವಿಡ್ ಅಲ್ಲದೆ ರೋಗಿಗಳು ಸಕಾಲಕ್ಕೆ ಚಿಕಿತ್ಸೆ ಸಿಗದೆ ಪರದಾಡುವಂತಾಗಿದೆ.
ನಿನ್ನೆಯ ಘಟನೆಯೇ ಉದಾಹರಣೆ : ನಿನ್ನೆ ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟಿ ಬಿ.ಶಾಂತಮ್ಮ ಮೈಸೂರಿನ ತಮ್ಮ ಮಗಳ ಮನೆಯಲ್ಲಿ ನಿಧನರಾದರು. ಇವರು ಶನಿವಾರ ಮಧ್ಯಾಹ್ನ ಊಟ ಮಾಡುವಾಗ ಗಂಟಲಿನಲ್ಲಿ ಅನ್ನ ಇಳಿಯುತ್ತಿರಲಿಲ್ಲ. ಅನ್ನನಾಳದ ಸಮಸ್ಯೆಯಿಂದ ಈ ರೀತಿ ಆಗುತ್ತಿರಬಹುದು ಎಂದು ಅವರ ಮಗಳು ನರ್ಸಿಂಗ್ ಹೋಂ ಒಂದಕ್ಕೆ ಕರೆದೊಯ್ದರು. ಈ ವೇಳೆ ನರ್ಸಿಂಗ್ ಹೋಂನವರು ನಮ್ಮಲ್ಲಿ ಬೆಡ್ ಖಾಲಿ ಇಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಶಾಂತಮ್ಮರನ್ನು ಇನ್ನೊಂದು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು.
ಅಲ್ಲೂ ಇದೇ ರೀತಿಯ ಉತ್ತರ ದೊರೆತಿದೆ. ಮಧ್ಯ ರಾತ್ರಿಯವರೆಗೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದು, ಕೊನೆಗೆ ಪರಿಚಿತ ವೈದ್ಯರೊಬ್ಬರ ಸಹಾಯದಿಂದ ಮಧ್ಯರಾತ್ರಿ 1 ಗಂಟೆಗೆ ನರ್ಸಿಂಗ್ ಹೋಂ ಒಂದಕ್ಕೆ ದಾಖಲಿಸಲಾಯಿತು. ಆದರೆ, ಭಾನುವಾರ ಸಂಜೆ ನಟಿ ಶಾಂತಮ್ಮ ನಿಧರಾದರು. ಸಕಾಲಕ್ಕೆ ತಾಯಿಗೆ ಚಿಕಿತ್ಸೆ ಸಿಕ್ಕಿದ್ದರೆ ಇನ್ನಷ್ಟು ದಿನ ನಮ್ಮ ಜೊತೆಯಿರುತ್ತಿದ್ದರು ಎಂದು ಮಗಳು ಸುಮನಾ ಅಳಲು ತೋಡಿಕೊಂಡಿದ್ದಾರೆ. ಈ ಘಟನೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗದೆ ಜನ ಪರದಾಡುತ್ತಿರುವುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ.
![Privet Hospital are Hesitating to treat Non Covid Patients](https://etvbharatimages.akamaized.net/etvbharat/prod-images/8099814_thu.jpg)
ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನಿರಾಕರಣೆಗೆ ಬೆಡ್, ಸಿಬ್ಬಂದಿ ಕೊರತೆ ಒಂದು ನೆಪ ಮಾತ್ರವಾಗಿದೆ. ಹೆಚ್ಚಿನ ಆಸ್ಪತ್ರೆಗಳಲ್ಲಿ ಕೋವಿಡ್ ಭಯದಿಂದ ರೋಗಿಗಳನ್ನು ದಾಖಲಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮಾತ್ರವಲ್ಲದೆ, ಮೆಡಿಕಲ್ ಶಾಪ್ಗಳಲ್ಲಿ ಔಷಧಿಗಳು ಕೂಡ ಸಿಗುತ್ತಿಲ್ಲ.
ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ವೆಂಕಟೇಶ್ ಅವರನ್ನು ಕೇಳಿದ್ರೆ, ಯಾವುದೇ ರೋಗಿಗಳಿಗೆ ಚಿಕಿತ್ಸೆ ಕೊಡಲು ಖಾಸಗಿ ಆಸ್ಪತ್ರೆಗಳು ನಿರಾಕರಿಸುವಂತಿಲ್ಲ. ಆದರೆ, ಕೋವಿಡ್ ಜೊತೆ ಇತರ ರೋಗಿಗಳಿಗೆ ಚಿಕಿತ್ಸೆ ನೀಡಲು ಸಾಧ್ಯವಿಲ್ಲ ಎನ್ನುತ್ತಾರೆ.