ಮೈಸೂರು: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಜೈಲಿಗೆ ಹಿಂದಿರುಗುವ ವೇಳೆ ಕೈದಿಯೊಬ್ಬ ಗಾಂಜಾವನ್ನು ಬಚ್ಚಿಟ್ಟುಕೊಂಡು ಕಾರಾಗೃಹದ ಒಳಗೆ ಹೋಗುವ ಸಮಯದಲ್ಲಿ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದಿರುವ ಘಟನೆ ಬುಧವಾರ ನಡೆದಿದೆ. ಮೈಸೂರು ಕಾರಾಗೃಹದಲ್ಲಿ ಸಜಾಬಂಧಿಯಾಗಿರುವ ಮಡಿಕೇರಿ ಬಳಿಯ ಇಬ್ಬಣಿವಾಳವಾಡಿ ಗ್ರಾಮದ ನಿವಾಸಿ ದುರ್ಗದತ್ತ ಕಾಳಿದಾಸಸ್ವಾಮಿ (28) ಕಾರಾಗೃಹದೊಳಕ್ಕೆ ಹೋಗುವ ವೇಳೆ ಸಿಕ್ಕಿ ಬಿದ್ದಿದ್ದಾನೆ.
ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆ ಅನುಭವಿಸುತ್ತಿದ್ದ ದುರ್ಗದತ್ತ ಕಾಳಿದಾಸಸ್ವಾಮಿಗೆ ಅನಾರೋಗ್ಯದ ಕಾರಣ ಜೈಲು ಅಧಿಕಾರಿಗಳು ಬುಧವಾರ ಮಧ್ಯಾಹ್ನ ಚಿಕಿತ್ಸೆಗಾಗಿ ಕೆಆರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆತನಿಗೆ ಚಿಕಿತ್ಸೆ ಕೊಡಿಸಿ ಬುಧವಾರ ಮಧ್ಯಾಹ್ನ 2 ಗಂಟೆ ವೇಳೆಗೆ ವಾಪಸ್ ಜೈಲಿಗೆ ಕರೆತಂದಿದ್ದಾರೆ. ಈ ವೇಳೆ ಆತನನ್ನು ಅಲ್ಲಿನ ಸಿಬ್ಬಂದಿಗಳಾದ ಉಮೇಶ್ ಚಂದ್ರನಾಯಕ್ ಹಾಗೂ ಶಿವಾನಂದ ಕೋಕಲೆ ಅವರು ತಪಾಸಣೆಗೊಳಪಡಿಸಿದ್ದಾರೆ. ಈ ವೇಳೆ ಆತನ ಬಲಗಾಲಿನಲ್ಲಿ ಕಪ್ಪು ಬಣ್ಣದ ಟೇಪ್ ಸುತ್ತಿರುವುದು ಅವರಿಗೆ ಕಂಡುಬಂದಿದೆ. ಕೂಡಲೇ ಟೇಪ್‌ನ್ನು ತೆಗೆದು ಪರಿಶೀಲನೆ ನಡೆಸಿದಾಗ ಅಲ್ಲಿ ಗಾಂಜಾ ಪೊಟ್ಟಣವಿರುವುದು ಕಂಡುಬಂದಿದೆ. ತಕ್ಷಣವೇ ಮೇಲಾಧಿಕಾರಿಗಳಿಗೆ ವಿಚಾರ ತಿಳಿಸಿದ್ದಾರೆ.
ಸ್ಥಳಕ್ಕೆ ಬಂದ ಕಾರಾಗೃಹ ಅಧಿಕಾರಿಗಳು ದುರ್ಗದತ್ತ ಅವರ ವಿರುದ್ಧ ಮಂಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕೆಆರ್ ಆಸ್ಪತ್ರೆಯ ಶೌಚಾಯದಲ್ಲಿ ನೆವೆಲ್ ಎಂಬಾತ ಇರಿಸಿದ್ದ ಗಾಂಜಾವನ್ನು ತೆಗೆದುಕೊಂಡು ಬಂದಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ. ಮಂಡಿ ಪೊಲೀಸರು 76 ಗ್ರಾಂ ಗಾಂಜಾ ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.
ಪ್ರತ್ಯೇಕ ಪ್ರಕರಣ; ಅನಾರೋಗ್ಯ ಪೌರಕಾರ್ಮಿಕ ಆತ್ಮಹತ್ಯೆ: ಅನಾರೋಗ್ಯದಿಂದ ಬೇಸತ್ತ ಪೌರಕಾರ್ಮಿಕರೊಬ್ಬರು ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ನಗರದಲ್ಲಿ ನಡೆದಿದೆ. ನಗರದ ಗಾಂಧಿನಗರ ನಿವಾಸಿ ಕೊಲ್ಲಪ್ಪ ಎಂಬವರ ಮಗ ಗಣೇಶ್‌ಕುಮಾರ್ (43) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ನಗರಪಾಲಿಕೆಯಲ್ಲಿ ಗುತ್ತಿಗೆ ಪೌರಕಾರ್ಮಿಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗಣೇಶ್ ಅವರು ಕೆಲ ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದರು ಎನ್ನಲಾಗಿದೆ. ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡ ಅವರು ಆತ್ಮಹತ್ಯೆ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಈ ಸಂಬಂಧ ಎನ್‌ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: NRE ಖಾತೆಗೆ ಕನ್ನ ಹಾಕಿ ಹಣ ಹೂಡಿಕೆ: ಸಹಾಯಕ ಬ್ಯಾಂಕ್ ಮ್ಯಾನೇಜರ್ ಬಂಧನ