ಮೈಸೂರು: ಮೈಸೂರಿನ ಮಹಾರಾಜ ಕಾಲೇಜಿನ ಮೈದಾನದಲ್ಲಿ ನರೇಂದ್ರ ಮೋದಿ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ನಾಗನಹಳ್ಳಿ ರೈಲ್ವೆ ಕೋಚಿಂಗ್ ಕಾಂಪ್ಲೆಕ್ಸ್ ಶಂಕುಸ್ಥಾಪನೆ, ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ 150 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ದಿವ್ಯಾಂಗರ ಕಟ್ಟಡ ಉದ್ಘಾಟನೆ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ ಕನ್ನಡದ ಡಿಂಡಿಮ ಬಾರಿಸಿದರು.
ಕನ್ನಡದಲ್ಲೇ ಮಾತು ಆರಂಭಿಸಿದ ಪ್ರಧಾನಿ ಮೋದಿ, "ಮೈಸೂರು ಹಾಗೂ ಕರ್ನಾಟಕದ ಸಮಸ್ತ ಜನತೆಗೆ ಪ್ರೀತಿ -ಪೂರ್ವಕ ನಮಸ್ಕಾರಗಳು" ಎಂದು ಉಚ್ಚರಿಸಿದರು. ಕರ್ನಾಟಕ ಆರ್ಥಿಕ ಮತ್ತು ಆಧ್ಯಾತ್ಮ ದರ್ಶನಕ್ಕೆ ಒಂದು ಒಳ್ಳೆಯ ಉದಾಹರಣೆ. ಮೈಸೂರು ಇತಿಹಾಸ, ಪರಂಪರೆಗೆ ಹೆಸರುವಾಸಿ. ಈ ನಗರದ ಪ್ರತೀ ಭಾಗದಲ್ಲೂ ಇದು ಎದ್ದು ಕಾಣುತ್ತದೆ ಎಂದರು.
ಇದೇ ಕಾರಣಕ್ಕೆ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆಗೆ ಮೈಸೂರನ್ನೇ ಆಯ್ಕೆ ಮಾಡಿದ್ದೇವೆ. ಮೈಸೂರಿನ ಮಹತ್ವವನ್ನು ಜಗತ್ತಿನಾದ್ಯಂತ ಜನ ನೋಡುತ್ತಾರೆ. ಮೈಸೂರು ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್.ಎಂ. ವಿಶ್ವೇಶ್ವರಯ್ಯ ಅವರಂತಹ ಮಹಾನ್ ವ್ಯಕ್ತಿಗಳ ಹುಟ್ಟೂರಾಗಿದ್ದು ಇತಿಹಾಸದ ಮಜಲುಗಳನ್ನು ಒತ್ತಿ ಹೇಳಿದರು.
ಮೈಸೂರಿನ ಪರಂಪರೆ ಒಂದೊಂದು ಕಲ್ಲಿನಲ್ಲೂ ಸಿಗುತ್ತೆ. ಅದಕ್ಕಾಗಿಯೇ ಮೈಸೂರಿನಲ್ಲಿ ಯೋಗ ಮಾಡಲು ಸೂಕ್ತವೆಂದು ಆಯ್ಕೆ ಮಾಡಿದ್ದೇನೆ. ಕೋಟಿ ಕೋಟಿ ಜನರು ಈ ಪುಣ್ಯ ಭೂಮಿಯಲ್ಲಿ ಹುಟ್ಟಿದ್ದಾರೆ. ಡಬಲ್ ಇಂಜಿನ್ ಸರ್ಕಾರ ಕರ್ನಾಟದಲ್ಲಿದೆ. ಒಳ್ಳೆಯ ಕೆಲಸ ಮಾಡುತ್ತಿದೆ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಮೈಸೂರು ಅಂದ್ರೆ ಮೋದಿ ಅವ್ರಿಗೆ ಬಹಳ ಪ್ರೀತಿ. ಯೋಗ ದಿನಾಚರಣೆ ಮೈಸೂರಿಗೆ ಬರಬೇಕು ಅನ್ನೋ ಇಚ್ಛೆ ಅವ್ರಿಗೆ ಮೊದಲೇ ಇತ್ತು. ಹಲವಾರು ಕಾರಣಗಳಿಂದ ಬರಲು ಆಗಿರಲಿಲ್ಲ. ನಾವು ಈ ಬಾರಿ ಮೋದಿ ಅವರನ್ನು ಆಹ್ವಾನಿಸಿದ್ದೆವು. ಮೋದಿ ಅವರು ನನಗೆ ಮೊದಲೇ ಬರಬೇಕು ಅಂತಿತ್ತು. ಕಾರಣಾಂತರದಿಂದ ಬರಲು ಆಗಲಿಲ್ಲ. ಈ ಬಾರಿ ಎಷ್ಟು ಮಳೆ ಆದ್ರೂ ಬರ್ತೀನಿ ಎಂದು ಹೇಳಿದ್ದರು. ಇದು ಮೈಸೂರು ಮೇಲಿನ ಅವರ ಪ್ರೀತಿ ತೋರಿಸುತ್ತದೆ ಎಂದು ಗುಣಗಾನ ಮಾಡಿದರು.
ಇದನ್ನೂ ಓದಿ: ಶಿಲಾನ್ಯಾಸ ಮಾಡಿದ ಯೋಜನೆಗಳು ಪೂರ್ಣಗೊಂಡಾಗ ಕರ್ನಾಟಕದ ಜಿಡಿಪಿ ಶೇ. 2 ರಷ್ಟು ಹೆಚ್ಚಳ: ಸಿಎಂ