ಮೈಸೂರು: ವಿದ್ಯಾವಂತ ಡಾಕ್ಟರ್ ಭಯೋತ್ಪಾದಕ ಕೃತ್ಯದಲ್ಲಿ ತೊಡಗಿರುವುದು ಜನರಲ್ಲಿ ಆತಂಕ ಉಂಟು ಮಾಡಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಇಂದು ಅರಮನೆ ಮುಂಭಾಗದಲ್ಲಿ ನಡೆದ ಸ್ವಚ್ಛ ಸರ್ವೇಕ್ಷಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವಿದ್ಯಾವಂತರೂ ಸಹ ಭಯೋತ್ಪಾದಕ ಕೃತ್ಯದಲ್ಲಿ ತೊಡಗಿರುವುದು ಆತಂಕಕ್ಕೆ ಕಾರಣವಾಗಿದೆ. ಇದಕ್ಕೆ ಬೆಂಗಳೂರಿನಲ್ಲಿ ಡಾಕ್ಟರ್ ಒಬ್ಬರನ್ನು ಬಂಧಿಸಿರುವುದೇ ಉದಾಹರಣೆಗೆಯಾಗಿದೆ ಎಂದರು.
ಬೆಂಗಳೂರು ಗಲಭೆಗೆ ಸಂಬಂಧಿಸಿದಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಿ ಎಂದು ಹೇಳುವುದೇ ಸರಿಯಲ್ಲ. ಅಲ್ಲದೆ ಎಸ್ಡಿಪಿಐ ನಿಷೇಧ ಎಂದಕೂಡಲೇ ಸಿದ್ದರಾಮಯ್ಯನವರಿಗೆ ಯಾಕೆ ಇಷ್ಟು ನೋವಾಗುತ್ತಿದೆ ಎಂಬುದು ನನಗೆ ಆಶ್ಚರ್ಯ ತರಿಸಿದೆ ಎಂದಿದ್ದಾರೆ.
ಬೆಂಗಳೂರು ಘಟನೆಯಲ್ಲಿ ಎಸ್ಡಿಪಿಐ ಪಾತ್ರದ ಬಗ್ಗೆ ತನಿಖಾಧಿಕಾರಿಗಳು ಸಾಕ್ಷಿಗಳನ್ನು ಕಲೆ ಹಾಕುತ್ತಿದ್ದು, ಸಂಘಟನೆಯನ್ನು ನಿಷೇಧಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು. ಜೊತೆಗೆ ಗಲಭೆಯಿಂದ ಆದ ನಷ್ಟವನ್ನು ಅವರಿಂದಲೇ ವಸೂಲಿ ಮಾಡುತ್ತೇವೆ. ಈ ಬಗ್ಗೆ ಕಾನೂನು ಮುಖಂಡರ ಜೊತೆ ಚರ್ಚೆ ನಡೆಸಿದ್ದೇವೆ ಎಂದು ಪ್ರತಾಪ್ ಸಿಂಹ ತಿಳಿಸಿದರು.