ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಳಗೊಂದು ಹೊರಗೊಂದು ಮಾತನಾಡುತ್ತಾರೆ ಎಂದು ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು 2006ರಲ್ಲಿ ಸಿದ್ದರಾಮಯ್ಯ ಅವರು, ಸೋನಿಯಾ ಗಾಂಧಿ ಅವರನ್ನು ಏಕವಚನದಲ್ಲಿ ನಿಂದನೆ ಮಾಡುತ್ತಿದ್ದರು. ಆದರೀಗ, ಅವರೇ ನಮ್ಮ ಅಧಿನಾಯಕಿ ಎಂದು ಹೇಳಿ ಕೊಳ್ಳುತ್ತಾರೆ. ಈ ಮಾತುಗಳಿಂದ ಯಾರು ಒಳಗೆ - ಹೊರಗೆ ಮಾತನಾಡುತ್ತಾರೆ ಎಂಬುದು ಗೊತ್ತಾಗುತ್ತದೆ ಎಂದು ಹರಿಹಾಯ್ದರು.
ಸಿದ್ದರಾಮಯ್ಯನವರೇ ನಿಮ್ಮ ಮಟ್ಟವನ್ನು ಪ್ರಧಾನಿಯವರಿಗೆ ಹೊಲಿಕೆ ಮಾಡಿಕೊಳ್ಳಬೇಡಿ, ಪ್ರತಿಬಾರಿ ನಿಮ್ಮನ್ನ ಪ್ರಶ್ನಿಸಿದಾಗ ನೀವು ಪ್ರಧಾನಿ ಹೆಸರು ಮಧ್ಯೆ ತರಬೇಡಿ. ನಮ್ಮನ್ನು ಕೇಳಿ ನಾವು ಉತ್ತರ ಕೊಡುತ್ತೇವೆ ಎಂದು ಸಿದ್ದರಾಮಯ್ಯ ಪಿಎಂ ಕೇರ್ ಲೆಕ್ಕ ಕೇಳಿರುವುದಕ್ಕೆ ಪ್ರತಾಪಸಿಂಹ ಎದಿರೇಟುಕೊಟ್ಟಿದ್ದಾರೆ.
ಕೋವಿಡ್-19 ನಿಯಂತ್ರಣದಲ್ಲಿ ರಾಜ್ಯ ಸರ್ಕಾರ ಅಕ್ರಮ ಎಸಗಿದೆ ಅಂತೀರಲ್ಲ, ದಾಖಲೆ ಪರಿಶೀಲನೆಗೆ ವಿಧಾನಸೌಧಕ್ಕೆ ಬನ್ನಿ ಎಂದರೂ ಬರುವುದಿಲ್ಲ, ಆದರೆ, ಪಿಎಂ ಕೇರ್ ಲೆಕ್ಕವನ್ನು ಮಾತ್ರ ಕೇಳ್ತೀರಾ?, ಇದು ಹೇಗೆ ಆಗುತ್ತೆ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದರು.
ಸಂತೋಷ್ ಅವರ ಭಾಷಣ ಕೇಳಿ ನನಗಿಂತ ಸಿದ್ದರಾಮಯ್ಯ ಅವರಿಗೆ ಖುಷಿಯಾಗಿದೆ. ಸಂತೋಷ್ ಅವರು ಹೇಳಿದ್ದು ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವಿಸ್ ರೀತಿಯಲ್ಲಿ ನಮ್ಮ ರಾಜ್ಯದ ವಿರೋಧ ಪಕ್ಷಗಳು ಕೆಲಸ ಮಾಡಲಿ ಎಂದು ಹೇಳಿದ್ದಾರೆ. ವಿರೋಧಪಕ್ಷವಾಗಿ ಅದನ್ನು ಸಕಾರಾತ್ಮಕವಾಗಿ ಸಿದ್ದರಾಮಯ್ಯ ಅವರು ಸ್ವೀಕರಿಸಬೇಕು ಎಂದರು.
ಸಿದ್ದರಾಮಯ್ಯ ಬಾಸ್ : ಸಿದ್ದರಾಮಯ್ಯ ಅವರು ರಾಜ್ಯವನ್ನಾಳಿದ ನಾಯಕರು, ಅದಕ್ಕೆ ಅವರನ್ನು ಬಾಸ್ ಅಂತ ಕರೆಯುತ್ತೇನೆ. ನಾನು ಯಾವಾಗಲೂ ಹಿರಿಯರಿಗೆ ಗೌರವ ಕೊಡುವವನು ಎಂದು ಟ್ವಿಟರ್ ನಲ್ಲಿ ನೀಡಿರುವ ಹೇಳಿಕೆ ಸಮರ್ಥಿಸಿಕೊಂಡಿದ್ದಾರೆ.