ಮೈಸೂರು: ನಗರದ ಬಿಜೆಪಿ ಕಚೇರಿಗೆ ಆಗಮಿಸಿದ ಹೆಚ್ಡಿ ಕೋಟೆಯ ಕೆಲ ಸ್ಥಳೀಯರು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ವೇಳೆ ಅವರಿಗೆ ಶಾಲು ಹೊದಿಸಿ ಸ್ವಾಗತಿಸಲಾಯಿತು. ಆದರೆ ಬೆತ್ತನಗೆರೆ ಶಂಕರ ಯಾರೆಂದು ತಮಗೆ ಗೊತ್ತಿಲ್ಲ ಅಂತ ಸಂಸದ ಪ್ರತಾಪ್ ಸಿಂಹ ಸ್ಪಷ್ಟಪಡಿಸಿದರು.
ಪ್ರತಾಪ್ ಸಿಂಹ ಅವರು ಬೆತ್ತನಗೆರೆ ಶಂಕರ ಅವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡಿದ್ದಾರೆಂಬ ಮಾಧ್ಯಮಗಳ ವರದಿ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನನಗೆ ಬೆತ್ತನಗೆರೆ ಶಂಕರನ ಬಗ್ಗೆ ಗೊತ್ತಿಲ್ಲ. ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಹೆಚ್ ಡಿ ಕೋಟೆ ಭಾಗದ ಸ್ಥಳೀಯ ಮುಖಂಡ ಅಪ್ಪಣ್ಣ ಎಂಬುವರು ಕೆಲವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಲು ಕಾರ್ಯಕ್ರಮ ಆಯೋಜಿಸಿದ್ದರು. ಇದರಲ್ಲಿ ಬೆತ್ತನಗೆರೆ ಶಂಕರ ಸಹ ಜೊತೆ ಇದ್ದರು ಎಂಬುದು ನನಗೆ ಗೊತ್ತಿಲ್ಲ. ಪ್ರತಿದಿನ ಬಿಜೆಪಿಗೆ ಸಾವಿರಾರು ಜನ ಬಂದು ಸೇರುತ್ತಾರೆ. ಅವರ ಜಾತಕ, ಕುಂಡಲಿ ತಿಳಿದುಕೊಂಡು ನಾನೇನು ಮಾಡಲಿ. ರೌಡಿಗಳನ್ನು ಇಟ್ಟುಕೊಂಡು ರಾಜಕಾರಣ ಮಾಡುವ ಕಾಲ ಹೋಗಿದೆ. ನನಗೆ ರೌಡಿಗಳ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಇದನ್ನೂ ಓದಿ: ಜಾತಿ, ಧರ್ಮ ಮುಂದಿಟ್ಟುಕೊಂಡು ನಾವು ಚುನಾವಣೆ ಎದುರಿಸುವುದಿಲ್ಲ: ಸಂಸದ ಪ್ರತಾಪ್ ಸಿಂಹ
ನನ್ನದು ಅಭಿವೃದ್ಧಿ ರಾಜಕಾರಣ, ನನಗೆ ರೌಡಿಗಳ ಅವಶ್ಯಕತೆ ಇಲ್ಲ. ನಾನೇ ಎಲ್ಲವನ್ನು ಎದುರಿಸುತ್ತೇನೆ. ಸಿದ್ದರಾಮಯ್ಯ ಸಿಎಂ ಅಗಿದ್ದಾಗಲೇ ಗೆದ್ದು ಬಂದಿದ್ದೇನೆ. ಪಕ್ಷದ ಕಾರ್ಯಕ್ರಮದಲ್ಲಿ ಸ್ಥಳೀಯ ನಾಯಕರ ಜೊತೆ ಬೆತ್ತನಗೆರೆ ಶಂಕರ ಬಂದಿರಬಹುದು. ಇದನ್ನು ದೊಡ್ಡದು ಮಾಡಬೇಡಿ, ಆತ ಯಾರೆಂದು ನನಗೆ ಗೊತ್ತಿಲ್ಲ ಎಂದು ಸಂಸದರು ಸ್ಪಷ್ಟೀಕರಣ ನೀಡಿದರು.