ಮೈಸೂರು: ರಾಜ್ಯದಲ್ಲಿ ಅತಿ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗಿರುವ ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರೇ ಕಾಣಿಸುತ್ತಿಲ್ಲ ಎಂದು ಅನಾಮಧೇಯ ಪೋಸ್ಟರ್ವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಜಿಲ್ಲೆಯ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಬೆಂಗಳೂರಿನಲ್ಲೇ ಇದ್ದಾರೆ. ರಾಜ್ಯದಲ್ಲಿ ಅತಿ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗಿರುವ ಮೈಸೂರು ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರು ಎಲ್ಲೂ ಕಾಣಿಸುತ್ತಿಲ್ಲ. ಇಲ್ಲಿನ ಕೆ.ಆರ್ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸಮಸ್ಯೆ ಇದೆ, ಇಲ್ಲಿ ನಿರ್ಗತಿಕರು, ನಿರಾಶ್ರಿತರು, ಕೂಲಿ ಕೆಲಸಕ್ಕಾಗಿ ಬಂದವರು, ಅನ್ನ ಮತ್ತು ಆಶ್ರಯಕ್ಕಾಗಿ ಪರದಾಡುತ್ತಿದ್ದಾರೆ. ಇಲ್ಲಿ ಸರಿಯಾದ ವೈದ್ಯಕೀಯ ವ್ಯವಸ್ಥೆ ಇಲ್ಲ. ಇದರ ಬಗ್ಗೆ ತಲೆಕೆಡಿಸಿಕೊಳ್ಳದೆ ಬೆಂಗಳೂರಿನಲ್ಲೇ ಇದ್ದೀರಿ. ಮೈಸೂರಿಗೆ ಬಂದು ಜನರ ಸಮಸ್ಯೆಗೆ ಸ್ಪಂದಿಸಿ, ದಸರಾ ಮಾಡಲು ಉತ್ಸಾಹ ತೋರಿದ ನೀವು ಕೊರೊನಾ ನಿಯಂತ್ರಣಕ್ಕೆ ಏಕೆ ಕ್ರಮ ಕೈಗೊಳ್ಳುತ್ತಿಲ್ಲ? ತಕ್ಷಣ ಬಂದು ಮೈಸೂರಿನಲ್ಲಿ ವಾಸ್ತವ್ಯ ಹೂಡಿ, ಜಿಲ್ಲೆಯ ಜನರ ಸಮಸ್ಯೆಗೆ ಸ್ಪಂದಿಸಿ ಎಂದು ಪೋಸ್ಟ್ ಮಾಡಲಾಗಿದೆ. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.