ಮೈಸೂರು: ಪೊಲೀಸ್ ಪೇದೆಯ ಮಗ ಸಾಮಾಜಿಕ ಜಾಲತಾಣದಲ್ಲಿ ತಂದೆ ಹೆಸರಿನಲ್ಲಿ ಯಡವಟ್ಟು ಮಾಡಿದ್ದಾನೆ. ಇದು ಆತನ ತಂದೆಯ ಕೆಲಸಕ್ಕೆ ತೊಂದರೆ ತಂದಿಟ್ಟಿರುವ ಪ್ರಕರಣ ನಂಜನಗೂಡು ಸಂಚಾರಿ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ನಂಜನಗೂಡಿನ ಸಂಚಾರಿ ಠಾಣೆಯಲ್ಲಿ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ನಂಜುಂಡ ರಾಜ್ ಅರಸ್ ಅಲಿಯಾಸ್ ದೀಪಕ್ ಅರಸ್ ಹೆಸರಿನಲ್ಲಿ ಅವರ ಮಗ ಸೂರಜ್ ಎಂಬಾತ ಫೇಸ್‌ಬುಕ್ ಖಾತೆ ತೆರೆದಿದ್ದಾನೆ. ಅಲ್ಲದೆ ಆ ಖಾತೆಯಲ್ಲಿ ಬಿಜೆಪಿಗೆ ಮತ ನೀಡುವಂತೆ ಪೋಸ್ಟ ಹಾಕಿ ಶೇರ್ ಮಾಡಿದ್ದ ಎನ್ನಲಾಗ್ತಿದೆ.
ಚುನಾವಣಾ ಅಧಿಕಾರಿಯಿಂದ ಎಸ್ಪಿಗೆ ಪತ್ರ:
ಈ ಸಂಬಂಧ ದೂರುಗಳು ಬಂದ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಗಳು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದು ಈ ಪೇದೆಯನ್ನು ಕೆಲಸದಿಂದ ವಜಾ ಮಾಡಬಹುದೇ ಎಂಬ ಬಗ್ಗೆ ವರದಿ ನೀಡುವಂತೆ ಕೇಳಿದ್ದಾರೆ.
ಈ ಬಗ್ಗೆ ನಂಜನಗೂಡು ಡಿವೈಎಸ್ಪಿ ಅವರು ಪೇದೆ ಹಾಗೂ ಅವರ ಮಗ ಸೂರಜ್ ಅಲಿಯಾಸ್ ಶಿವರಾಜ್ ಎಂಬುವರನ್ನು ಕರೆದು ವಿಚಾರಣೆ ನಡೆಸಿದ್ದಾರೆ.