ಮೈಸೂರು: ಒಂದು ವಾರದಿಂದ ಮೆನೇಲೆ ಇದ್ದೀನಿ.. ಆಚೆ ಬಂದಿಲ್ಲ ಎಂದು ಹೇಳಿ ಬೀದಿಗೆ ಬಂದಿದ್ದ ಯುವಕನಿಗೆ ಬಿಸಿ ಮುಟ್ಟಿಸಿದ ಪೊಲೀಸರು ಆತನ ಬೈಕ್ ವಶಪಡಿಸಿಕೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ.
ಕೊರೊನಾ ವೈರಸ್ ಹರಡದಂತೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೂ, ಸಾರ್ವಜನಿಕರು ಹಾಗೂ ವಾಹನ ಸವಾರರು ಇಂದಿಗೂ ಬುದ್ಧಿ ಕಲಿತ್ತಿಲ್ಲ. ಮೈಸೂರು ನಗರದಲ್ಲಿ ಈಗಾಗಲೆ 303 ವಾಹನಗಳನ್ನು ಸೀಜ್ ಮಾಡಲಾಗಿದೆ. ಅದರ ಮಾಹಿತಿ ಗೊತ್ತಿದ್ದರೂ ಸಹಾ ಸುಕಾ ಸುಮ್ಮನೆ ಬೀದಿ ಸುತ್ತಲು ಬಂದವರಿಗೆ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ.
ಮೈಸೂರಿನ ಅಶೋಕ ರಸ್ತೆಯಲ್ಲಿರುವ ಕೇಂದ್ರ ಕಾರಾಗೃಹದ ಸಮೀಪ ಅನಾವಶ್ಯಕವಾಗಿ ತಿರುಗಾಡುತ್ತಿರುವ ವಾಹನ ಸವಾರರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದು, ವಾರದಿಂದ ಮನೇಲಿ ಇದ್ದೀನಿ, ಹೊರಗೆ ಬಂದಿದ್ದು ತಪ್ಪೇ? ಎಂದು ಪೊಲೀಸರನ್ನ ದಬಾಯಿಸಿದ ಬೈಕ್ ಸವಾರರಿಗೆ ಬಿಸಿಮುಟ್ಟಿಸಿರುವ ಪೊಲೀಸರು ಬೈಕ್ ವಶಪಡಿಸಿಕೊಂಡಿದ್ದಾರೆ.
ಹಾಗೆಯೇ ಕುಟುಂಬ ಸಮೇತ ಅಂಗಡಿಗೆ ತೆರಳುತ್ತಿದ್ದ ವ್ಯಕ್ತಿಯ ಬೈಕ್ ಕಿತ್ತುಕೊಂಡು ಕಳುಹಿಸಿದ್ದಾರೆ. ಕೊರೊನಾ ವಿರುದ್ಧ ಸಮರ ಸಾರಿರುವ ಸರ್ಕಾರಕ್ಕೆ ಪೊಲೀಸರು ಹಗಲು ರಾತ್ರಿಯೆನ್ನದೆ ದುಡಿಯುತ್ತಿದ್ದರೂ, ಜನರು ಮಾತ್ರ ಮಾರಕ ವೈರಸ್ ಹರಡುವಿಕೆ ತಪ್ಪಿಸಲು ನೆರವಾಗದಿರುವುದು ವಿಪರ್ಯಾಸವೇ ಸರಿ.