ಮೈಸೂರು : ಸ್ವಂತ ಖರ್ಚಿನಿಂದ ರಸ್ತೆ ಗುಂಡಿ ಮುಚ್ಚಿದ ನಗರದ ದೇವರಾಜ ಸಂಚಾರ ಠಾಣೆ ಪೊಲೀಸರ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.
ನಗರ ಹೃದಯ ಭಾಗ ಜಯಚಾಮರಾಜ ಒಡೆಯರ್ ವೃತ್ತದ ರಸ್ತೆಗಳಲ್ಲಿ ಗುಂಡಿಗಳು ಸೃಷ್ಟಿಯಾಗಿತ್ತು. ಪ್ರತಿ ಬಾರಿ ದಸರಾಗೂ ಮುನ್ನ ನಗರ ಪಾಲಿಕೆ ಗುಂಡಿ ಬಿದ್ದ ರಸ್ತೆಗಳಿಗೆ ತೇಪೆ ಹಾಕುತ್ತಿತ್ತು. ಆದರೆ, ಈ ಬಾರಿ ಸರ್ಕಾರದಿಂದ ಅನುದಾನ ಸಿಗದ ಹಿನ್ನೆಲೆ, ಯಾವುದೇ ರಸ್ತೆಗಳನ್ನು ದುರಸ್ತಿ ಮಾಡಿಲ್ಲ. ಹೀಗಾಗಿ, ಅರಮನೆ ಸಮೀಪದ ರಸ್ತೆಗಳ ಗುಂಡಿಗಳನ್ನು ಪೊಲೀಸರೇ ಮುಚ್ಚಿದ್ದಾರೆ.
ದಸರಾ ಹಬ್ಬ ಹಿನ್ನೆಲೆ, ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ಹೀಗಾಗಿ, ರಸ್ತೆ ಗುಂಡಿಗಳಿಂದ ಹೆಚ್ಚಿನ ಅಪಘಾತ ಸಂಭವಿಸುವ ಸಾಧ್ಯತೆಯಿದೆ. ಇದನ್ನು ಮನಗಂಡ ದೇವರಾಜ ಸಂಚಾರಿ ಠಾಣೆಯ ಎಎಸ್‌ಐ ಸುಬ್ರಮಣಿ ಅವರು ಸ್ವಂತ ಖರ್ಚಿನಲ್ಲಿ ಸಿಮೆಂಟ್, ಜಲ್ಲಿ, ಎಂ.ಸ್ಯಾಂಡ್ ತರಿಸಿದ್ದರು. ಇನ್ಸ್ಪೆಕ್ಟರ್ ಮುನಿಯಪ್ಪ ನೇತೃತ್ವದಲ್ಲಿ ಸಿಬ್ಬಂದಿಗಳಾದ ಸ್ವಾಮಿ ಮತ್ತು ಸುಗು ನೆರವಿನಿಂದ ಬಿ.ಎನ್ ರಸ್ತೆ, ಅಶೋಕ ರಸ್ತೆ, ಸಯ್ಯಾಜಿರಾವ್ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳ 20 ಕ್ಕೂ ಅಧಿಕ ಗುಂಡಿಗಳನ್ನು ಕಾಂಕ್ರಿಟ್‌ನಿಂದ ಮುಚ್ಚಲಾಯಿತು.
ಕೆಲ ತಿಂಗಳ ಹಿಂದೆ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆದು ಕರ್ತವ್ಯಕ್ಕೆ ಮರಳಿದ ಎಎಸ್ ಐ ಸುಬ್ರಮಣಿ ಅವರು, ಮೊದಲ ದಿನವೇ ರಸ್ತೆ ಗುಂಡಿಗಳನ್ನು ಮುಚ್ಚಿಸುವ ಮೂಲಕ ಪೊಲೀಸ್ ಅಧಿಕಾರಿಗಳು ಹಾಗೂ ಸಾರ್ವಜನಿಕರ ಮೆಚ್ಚುಗೆ ಗಳಿಸಿದ್ದಾರೆ.