ಮೈಸೂರು: ಬಿಹಾರ ಮೂಲದ ಲಾರಿ ಚಾಲಕ ಹೃದಯಾಘಾತದಿಂದ ಮೃತಪಟ್ಟಿದ್ದರು. ಆದರೆ, ಕುಟುಂಬಸ್ಥರಲ್ಲಿ ಶವ ತೆಗೆದುಕೊಂಡು ಹೋಗಲು ಹಣವಿರಲಿಲ್ಲ. ಹೀಗಾಗಿ, ಮಾನವೀಯತೆಯ ಆಧಾರದಲ್ಲಿ ಪೊಲೀಸರೇ ಶವಸಂಸ್ಕಾರ ನೆರವೇರಿಸಿದರು.
ಬಿಹಾರದ ಸರನ್ ಜಿಲ್ಲೆಯ ದೂದ್ನಾಥ್ ಮಾಂಜಿ (55) ಡಿಸೆಂಬರ್ 18ರಂದು ಬಿಹಾರದಿಂದ ಹೊರಟು ಆಂಧ್ರಪ್ರದೇಶದ ಅನಂತಪುರದಲ್ಲಿ ಲಾರಿ ಅನ್ಲೋಡ್ ಮಾಡಿ ಡಿಸೆಂಬರ್ 23ರಂದು ಮೈಸೂರಿನ ಭಾರತ್ ರೋಡ್ ವೇಸ್ ಕಂಪನಿಗೆ ಬಂದಿದ್ದರು. ಸರಕುಗಳನ್ನು ಲೋಡ್ ಮಾಡುತ್ತಿರುವ ಸಂದರ್ಭದಲ್ಲಿ ಚಾಲಕನಿಗೆ ಹೃದಯಾಘಾತ ಸಂಭವಿಸಿದೆ. ತಕ್ಷಣವೇ ಕಂಪೆನಿಯವರು ಆತನನ್ನು ಅಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಿಸದೇ ಮಾಂಜಿ ಮೃತಪಟ್ಟಿದ್ದರು.
ಈ ಬಗ್ಗೆ ಕುಟುಂಬದವರಿಗೆ ಕಂಪೆನಿಯ ಮ್ಯಾನೇಜರ್ ಮಾಹಿತಿ ನೀಡಿದ್ದರು. ಆದರೆ, ಪ್ರತಿಸಲವೂ ಕರೆ ಮಾಡಿದಾಗಲು ಬರುವುದಾಗಿ ಹೇಳುತ್ತಿದ್ದ ಕುಟುಂಬದವರು ಬರಲೇ ಇಲ್ಲ. ಕಂಪೆನಿಯವರು ಕೊನೆಯದಾಗಿ ಸ್ಥಳೀಯ ಪೊಲೀಸ್ ಠಾಣೆಗೆ ಘಟನೆಯ ಮಾಹಿತಿ ನೀಡಿದ್ದಾರೆ.
ಪೊಲೀಸರು ಕುಟುಂಬದವರನ್ನು ಸಂಪರ್ಕಿಸಿದಾಗ, ನಮಗೆ ಬರಲು ಸಾಧ್ಯವಿಲ್ಲ. ನಮ್ಮ ಬಳಿ ಹಣವೂ ಇಲ್ಲ. ನೀವೇ ಶವವನ್ನು ಅಂತ್ಯಸಂಸ್ಕಾರ ಮಾಡಿ ಎಂದು ಕುಟುಂಬದವರು ಮನವಿ ಮಾಡಿದ್ದಾರೆ. ಈ ಮನವಿಯ ಮೇರೆಗೆ ಪೊಲೀಸರು ಹಾಗೂ ಭಾರತ್ ರೋಡ್ ವೇಸ್ ಸಿಬ್ಬಂದಿ ಸೇರಿ ಚಾಲಕನ ಕುಟುಂಬಕ್ಕೆ ವಿಡಿಯೋ ಕರೆ ಮಾಡಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ ಎಂದು ಭಾರತ್ ರೋಡ್ ವೇಸ್ ಕಂಪನಿಯ ಮ್ಯಾನೇಜರ್ ಮಹಾದೇವ್ ಮಾಹಿತಿ ನೀಡಿದರು.
ದೂದ್ನಾಥ್ ಮಾಂಜಿ ಶವವನ್ನು ಕಳೆದೊಂದು ವಾರದಿಂದ ಕೆ.ಆರ್.ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು. ಇಂದು ನಗರದ ಹೈವೇ ಸರ್ಕಲ್‌ನಲ್ಲಿರುವ ಜೋಡಿ ತೆಂಗಿನಮರ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಇದನ್ನೂ ಓದಿ: ಹೊಸ ವರ್ಷದ ನಿಮಿತ್ತ 2 ಲಕ್ಷ ತಿರುಪತಿ ಮಾದರಿ ಲಾಡು ವಿತರಣೆ