ಮೈಸೂರು: ಮೈಸೂರು ಮತ್ತು ಬೆಂಗಳೂರು ನಗರದಲ್ಲಿ ಉಗ್ರರು ಸ್ಫೋಟದ ಸಂಚು ರೂಪಿಸಿದ್ದಾರೆ ಎಂಬ ಬಂಧಿತ ಉಗ್ರನ ಸುಳಿವು ಹಿನ್ನೆಲೆ ನಗರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಪಾಕಿಸ್ತಾನದ ಐಎಸ್ಐ ಬೆಂಬಲದೊಂದಿಗೆ ಭಾರತದಲ್ಲಿ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಿದ್ದ ಶಂಕಿತ 6 ಮಂದಿ ಉಗ್ರರನ್ನು ದೆಹಲಿ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಬಂಧಿತರನ್ನು ವಿಚಾರಣೆಗೆ ಒಳಪಡಿಸಿದಾಗ ಮೈಸೂರು ಹಾಗೂ ಬೆಂಗಳೂರಿನಲ್ಲಿ ವಿದ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿರುವುದಾಗಿ ಬಾಯ್ಬಿಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಮೈಸೂರು ಪೊಲೀಸರಿಗೆ ಹಾಗೂ ರಾಜ್ಯ ಗುಪ್ತಚರ ಸಿಬ್ಬಂದಿಗೆ ಎಚ್ಚರ ವಹಿಸುವಂತೆ ಸೂಚಿಸಿದ್ದಾರೆ.
ನಗರದ ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಗುಪ್ತಚರ ಅಧಿಕಾರಿಗಳು ಮಫ್ತಿಯಲ್ಲಿ ನಿಗಾ ಇಟ್ಟಿದ್ದಾರೆ. ಇತ್ತೀಚೆಗೆ ಚಾಮರಾಜನಗರ ಜಿಲ್ಲೆಯ ಬಂಡೀಪುರ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಸ್ಯಾಟಲೈಟ್ ಫೋನ್ ಬಳಕೆಯಾಗಿರುವ ಬಗ್ಗೆ ವರದಿಯಾಗಿತ್ತು. ಆ ಬಗ್ಗೆಯೂ ಸಹ ಪೊಲೀಸರು ಕೇಂದ್ರ ಗುಪ್ತಚರ ಇಲಾಖೆಗೆ ಮಾಹಿತಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.
ಓದಿ: ದೆಹಲಿಯಲ್ಲಿ ಬಂಧಿತನಾಗಿದ್ದ ಉಗ್ರನ ಚಿಕ್ಕಪ್ಪ ಪ್ರಯಾಗರಾಜ್ನಲ್ಲಿ ಶರಣಾಗತಿ