ಮೈಸೂರು: ಮಂಗಳೂರಿನಲ್ಲಿ ಇತ್ತೀಚೆಗೆ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟದ ರೂವಾರಿ ಶಾರೀಕ್ ಮೈಸೂರಿನಲ್ಲಿ ನೆಲೆಸಿದ್ದ ಹಿನ್ನೆಲೆ, ಮನೆ ಮಾಲೀಕರು ಮನೆ ಅಥವಾ ಕೊಠಡಿಗಳನ್ನು ಬಾಡಿಗೆಗೆ ನೀಡುವಾಗ ಬಾಡಿಗೆದಾರರ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕು ಎಂದು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಹೇಳಿದರು.
ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಾಡಿಗೆದಾರರ ನಿಖರ ದಾಖಲೆಗಳು, ಎಲ್ಲಿ ಕೆಲಸ ಮಾಡುತ್ತಿದ್ದಾರೆಂಬ ವಿವರಗಳನ್ನು ಪಡೆದುಕೊಳ್ಳಬೇಕು. ಬರುವ ಡಿಸೆಂಬರ್ ಅಂತ್ಯದೊಳಗೆ ಬಾಡಿಗೆದಾರರ ಮಾಹಿತಿಗಳನ್ನೊಳಗೊಂಡ ವಿವರಗಳನ್ನು ಪೊಲೀಸರಿಗೆ ಮನೆ ಮಾಲೀಕರು ನೀಡಬೇಕು ಎಂದು ಎಚ್ಚರಿಕೆ ನೀಡಿದರು.
ಇದಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಪೊಲೀಸರಿಂದ ಪಡೆದುಕೊಂಡು, ಆ ಅರ್ಜಿಯಲ್ಲಿ ಬಾಡಿಗೆದಾರರ ಸಂಪೂರ್ಣ ವಿವರಗಳನ್ನು ಭರ್ತಿ ಮಾಡಿ ಪೊಲೀಸರಿಗೆ ನೀಡಬೇಕು. ಒಂದು ವೇಳೆ, ಬಾಡಿಗೆದಾರರ ಮಾಹಿತಿ ನೀಡದೇ ಏನಾದರೂ ಅನಾಹುತ ಆದರೆ ಅದಕ್ಕೆ ಮನೆ ಮಾಲೀಕರುಗಳೇ ಹೊಣೆಯಾಗುತ್ತಾರೆ. ಬಾಡಿಗೆದಾರರು ಗಂಭೀರ ಅಪರಾಧ ಕೃತ್ಯಗಳನ್ನು ಎಸಗಿದರೆ ಅದಕ್ಕೆ ಮನೆ ಮಾಲೀಕರು ಸಹ ಹೊಣೆಯಾಗಬೇಕಾಗುತ್ತದೆ. ಹಾಗಾಗಿ ಮನೆ ಮಾಲೀಕರು ಬಾಡಿಗೆದಾರರ ವಿವರವನ್ನು ಪೊಲೀಸರಿಗೆ ತಪ್ಪದೇ ನೀಡಬೇಕು ಎಂದರು.
ಅನಗತ್ಯ ಓಡಾಟಕ್ಕೆ ಬ್ರೇಕ್ : ಮೈಸೂರು ನಗರದೊಳಗೂ 20 ಕ್ಕೂ ಹೆಚ್ಚು ಆಯಕಟ್ಟಿನ ಸ್ಥಳಗಳಲ್ಲಿ ನಿರಂತರ ತಪಾಸಣೆ ನಡೆಸಲು ಪೊಲೀಸರ ತಂಡ ರಚನೆ ಮಾಡಲಾಗಿದೆ. ರಾತ್ರಿ 11ರ ಬಳಿಕ ಯಾರೂ ಕೂಡ ಅನಗತ್ಯವಾಗಿ ಓಡಾಡಿದಲ್ಲಿ ತಪಾಸಣೆ ಮಾಡಲಾಗುವುದು. ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತದೆ.
ವ್ಯಾಪಾರಸ್ಥರು ಕೂಡ ಅನಗತ್ಯವಾಗಿ ರಾತ್ರಿ 11 ಗಂಟೆ ಬಳಿಕ ವಹಿವಾಟು ನಡೆಸಬೇಡಿ. ಹಳೇ ರೌಡಿಶೀಟರ್ಗಳ ಚಲನವಲನಗಳ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ, ಅಗತ್ಯ ಬಿದ್ದರೆ ಸಮಾಜ ಘಾತುಕ ವ್ಯಕ್ತಿಗಳನ್ನು ಗಡಿಪಾರು ಮಾಡುತ್ತೇವೆ ಎಂದರು.
ಮೈಸೂರಿಗೆ ಕೆಲಸ ಹುಡುಕಿಕೊಂಡು ವಲಸೆ ಬರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಬೇರೆಡೆಯಿಂದ ವಲಸೆ ಬಂದು ಮನೆ ಕೆಲಸ, ಸೆಕ್ಯೂರಿಟಿ ಕೆಲಸ ಸೇರಿದಂತೆ ಇನ್ನಿತರ ವೃತ್ತಿ ಮಾಡುವವರ ಸಂಪೂರ್ಣ ಮಾಹಿತಿಗಳನ್ನು ಸಂಗ್ರಹಿಸಿ ಪೊಲೀಸರಿಗೆ ನೀಡಬೇಕು. ಮಾಹಿತಿಗಳನ್ನು ನೀಡಿದರೆ ಪೊಲೀಸರು ಪರಿಶೀಲನೆ ನಡೆಸಲಿದ್ದಾರೆ. ಹೋಟೆಲ್ಗಳಲ್ಲಿ ವಾಸ್ತವ್ಯ ಹೂಡುವವರಿಗೂ ಅಗತ್ಯ ದಾಖಲಾತಿಗಳನ್ನು ನೀಡಿದರೆ ಮಾತ್ರ ಕೊಠಡಿ ಬಾಡಿಗೆಗೆ ನೀಡಬೇಕು ಎಂದು ಹೇಳಿದರು.
ಇದನ್ನೂ ಓದಿ: ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಶಾರೀಕ್ನನ್ನು ನಾವು ವಿಚಾರಣೆ ಮಾಡಿಲ್ಲ.. ಕಮಿಷನರ್ ಶಶಿಕುಮಾರ್