ಮೈಸೂರು: ನೋ ಪಾರ್ಕಿಂಗ್ ಜಾಗದಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿದರೆ ಅಂತಹ ವಾಹನಗಳನ್ನು ಪೊಲೀಸರೇ ಲಾಕ್ ಮಾಡುವ ಹೊಸ ಪದ್ಧತಿಯನ್ನು ನಗರ ಪೊಲೀಸ್ ಜಾರಿಗೆ ತಂದಿದೆ.
ನಗರದಲ್ಲಿ ದ್ವಿಚಕ್ರ ವಾಹನಗಳನ್ನು ಪಾರ್ಕಿಂಗ್ ಮಾಡಲು ಸಮಸ್ಯೆ ಇದ್ದು, ಇದರಿಂದ ಬೈಕ್ ಸವಾರರು ರಸ್ತೆಯಲ್ಲಿ ಎಲ್ಲಿ ಬೇಕೋ ಅಲ್ಲಿ ವಾಹನಗಳನ್ನು ನಿಲ್ಲಿಸಿ ಹೋಗುತ್ತಾರೆ. ನೋ ಪಾರ್ಕಿಂಗ್ ಜಾಗ ಆಗಿದ್ದರೂ ಸಹ ಅದನ್ನು ನೋಡದೆ ತಮ್ಮ ವಾಹನವನ್ನು ನಿಲ್ಲಿಸಿ ಹೋಗುತ್ತಿದ್ದರು.
ಈ ಹಿಂದೆ ಇಂತಹ ವಾಹನಗಳನ್ನು ಸಂಚಾರಿ ಠಾಣೆಯ ಅಧಿಕಾರಿಗಳು ಎತ್ತಿಕೊಂಡು ಹೋಗುತ್ತಿದ್ದರು. ಈ ಕುರಿತು ಅನೇಕ ದೂರುಗಳು ಬಂದ ಹಿನ್ನಲೆಯಲ್ಲಿ ನಗರ ಪೊಲೀಸ್ ಕಮಿಷನರ್ ಹಾಗೂ ಸಂಚಾರಿ ಠಾಣೆಯ ಎಸಿಪಿ ಮೋಹನ್ ಹೊಸ ಪದ್ದತಿಯನ್ನು ಜಾರಿಗೆ ತಂದಿದ್ದು, ನೋ ಪಾರ್ಕಿಂಗ್ ಜಾಗದಲ್ಲೇ ದ್ವಿಚಕ್ರ ವಾಹನಗಳ ಚಕ್ರಕ್ಕೆ ಲಾಕ್ ಮಾಡುವಂತಹ ವ್ಯವಸ್ಥೆ ಇದಾಗಿದೆ.
ಹೇಗಿದೆ ಲಾಕ್ ಸಿಸ್ಟಮ್:
ನೋ ಪಾರ್ಕಿಂಗ್ ಜಾಗದಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿದರೆ ಅಲ್ಲಿಗೆ ಸಂಚಾರಿ ಅಧಿಕಾರಿಗಳು ಬಂದು ದ್ವಿಚಕ್ರ ವಾಹನದ ಹಿಂಬದಿಯ ಚಕ್ರಕ್ಕೆ ಕಬ್ಬಿಣದ ಲಾಕ್ ಅನ್ನು ಅಳವಡಿಸುತ್ತಾರೆ. ವಾಹನದ ಮೇಲೆ ಸಂಬಂಧ ಪಟ್ಟ ಸಂಚಾರಿ ಠಾಣೆಯ ದೂರವಾಣಿ ಇರುವ ಸ್ಟಿಕ್ಕರ್‌ನ ಅಂಟಿಸಿ ಹೋಗುತ್ತಾರೆ.
ಆ ಸ್ಟಿಕ್ಕರ್ ಅಂಟಿಸಿದ 1 ಗಂಟೆಯೊಳಗೆ ಸಂಬಂಧ ಪಟ್ಟ ಠಾಣೆಗೆ ದೂರವಾಣಿ ಕರೆ ಮಾಡಿ ತಮ್ಮ ವಾಹನವನ್ನು ಬಿಡಿಸಿಕೊಂಡು ಹೋದರೆ 100 ರೂಪಾಯಿ ದಂಡ ವಿಧಿಸಲಾಗುತ್ತದೆ. 1 ಗಂಟೆ ಬಳಿಕ ಫೋನ್ ಮಾಡಿದ್ರೇ 700 ರೂಪಾಯಿ ದಂಡ ವಿಧಿಸುತ್ತಾರೆ. ಈ ಮೂಲಕ ಜನರಲ್ಲಿ ಭಯ ಹುಟ್ಟಿಸಲು ಅಧಿಕಾರಿಗಳು ಮುಂದಾಗಿದ್ದಾರೆ.