ಮೈಸೂರು : ಮಿಸ್ಡ್ ಕಾಲ್ ಮೂಲಕ ಪರಿಚಯವಾಗಿ, ಆ ಬಳಿಕ ಪರಿಚಯ ಪ್ರೀತಿಯಾಗಿ ಕೊನೆಗೆ ಅತ್ಯಾಚಾರ ಆರೋಪದೊಂದಿಗೆ ಅಂತ್ಯಗೊಂಡ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ನಡೆದಿದೆ.
ಸಲಾವುದ್ದೀನ್ (26) ಎಂಬಾತ ಅತ್ಯಾಚಾರ ಆರೋಪಿಯಾಗಿದ್ದಾನೆ. ನಂಜನಗೂಡು ಪಟ್ಟಣದಲ್ಲಿ ಹೋಲ್ ಸೇಲ್ ಹಣ್ಣಿನ ವ್ಯಾಪಾರಿಯಾಗಿರುವ ಈತನಿಗೆ ಮಿಸ್ಡ್ ಕಾಲ್ ಮೂಲಕ ಯುವತಿಯೊಬ್ಬಳು ಪರಿಚಯವಾಗಿದ್ದಳು. ಇಬ್ಬರ ಮಿಸ್ಡ್ ಕಾಲ್ ಪರಿಚಯ ಬಳಿ ಪ್ರೀತಿಗೆ ತಿರುಗಿತ್ತು. ಕಳೆದ 5 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಜೋಡಿ ವಿವಾಹವಾಗುವ ನಿರ್ಧಾರ ಮಾಡಿದ್ದರು.
ಈ ನಡುವೆ ಮದುವೆಯಾಗುವುದಾಗಿ ನಂಬಿಸಿದ್ದ ಸಲಾವುದ್ದೀನ್ ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ. ಪ್ರಿಯತಮನ ಮಾತನ್ನು ನಂಬಿದ ಯುವತಿ ಆತನಿಗೆ ಸಾಕಷ್ಟು ಹಣವನ್ನೂ ಕೊಟ್ಟಿದ್ದಳು ಎನ್ನಲಾಗ್ತಿದೆ.
ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದಲ್ಲದೆ, ಆಕೆಯಿಂದ ಹಣ ಪಡೆದ ಸಲಾವುದ್ದೀನ್, ಇದೀಗ ಮತ್ತೊಂದು ಯುವತಿಯೊಂದಿಗೆ ಮದುವೆಯಾಗಿ ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಓದಿ : ಮೈಸೂರಲ್ಲಿ ಆಸ್ಪತ್ರೆ ಗ್ರಿಲ್ ಮುರಿದು ಬಂದು ಬುದ್ಧಿಮಾಂದ್ಯ ಮಹಿಳೆ ಮೇಲೆ ಅತ್ಯಾಚಾರ!
15 ದಿನಗಳ ಹಿಂದೆ ಸಲಾವುದ್ದೀನ್ ಮತ್ತೊಂದು ಹುಡುಗಿಯ ಜೊತೆ ಮದುವೆ ಮಾಡಿಕೊಂಡಿದ್ದಾನೆ. ದೈಹಿಕ ಸಂಪರ್ಕ ಬೆಳೆಸಿದ ಬಗ್ಗೆ ಬಾಯಿಬಿಟ್ಟರೆ ಕೊಲೆ ಮಾಡುವುದಾಗಿ ಸಲಾವುದ್ದೀನ್ ಯುವತಿಗೆ ಬೆದರಿಕೆ ಹಾಕಿದ್ದನಂತೆ. ಈತನ ವಂಚನೆಯಿಂದ ನೊಂದ ಯುವತಿ ನಂಜನಗೂಡು ಪಟ್ಟಣ ಠಾಣೆ ಪೊಲೀಸರ ಮೊರೆ ಹೋಗಿದ್ದಾಳೆ.
ಯುವತಿ ಕೊಟ್ಟ ದೂರಿನ ಅನ್ವಯ ಪೊಲೀಸರು ಆರೋಪಿ ಸಲಾವುದ್ದೀನ್ನನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ವಿರುದ್ಧ ಅತ್ಯಾಚಾರ, ವಂಚನೆ, ಬೆದರಿಕೆ ಪ್ರಕರಣ ದಾಖಲಾಗಿದೆ.