ಮೈಸೂರು: ಅಪ್ಪನ ಹಳೆ ಸ್ಕೂಟರ್ನಲ್ಲಿ ಅಮ್ಮನ ಆಸೆಯಂತೆ ತೀರ್ಥಯಾತ್ರೆ ಮುಗಿಸಿ ಮರಳಿ ಮೈಸೂರಿಗೆ ಆಗಮಿಸಿದ್ದಾರೆ ಆಧುನಿಕ ಶ್ರವಣಕುಮಾರ ಎಂದೇ ಕರೆಯಿಸಿಕೊಳ್ಳುವ ಬೋಗಾದಿಯ ಕೃಷ್ಣಕುಮಾರ್.
ಹೌದು, ಪುರಾಣದಲ್ಲಿ ತಂದೆ-ತಾಯಿಯ ಆಸೆಯಂತೆ ಶ್ರವಣಕುಮಾರ ಬಿದಿರಿನ ಬುಟ್ಟಿ ಮಾಡಿ ದೀರ್ಘ ಪ್ರಯಾಣ ಬೆಳೆಸಿ ಕಾಶಿಯಾತ್ರೆ ಮಾಡಿಸಿದ್ದ ಕಥೆಯನ್ನು ಎಲ್ಲರೂ ಕೇಳಿದ್ದೇವೆ. ಆದರೆ ಇಲ್ಲೊಬ್ಬ ಮಗ ತನ್ನ ತಂದೆ ಕೊಡಿಸಿದ ಹಳೆ ಸ್ಕೂಟರ್ನಲ್ಲಿ ತಾಯಿಗೆ ತೀರ್ಥಯಾತ್ರೆಯ ದರ್ಶನ ಮಾಡಿಸಿದ್ದಾರೆ. ನಗರದ ಬೋಗಾದಿ ನಿವಾಸಿಯಾಗಿರುವ ಕೃಷ್ಣಕುಮಾರ್ ಆಧುನಿಕ ಶ್ರವಣಕುಮಾರನಾಗಿದ್ದು, ತನ್ನ ತಾಯಿ ಚೂಡಾರತ್ನ ಅವರಿಗೆ ಹಳೆ ಸ್ಕೂಟರ್ನಲ್ಲಿ ತೀರ್ಥಯಾತ್ರೆ ಮಾಡಿಸಿದ್ದಾರೆ.
ಜನವರಿ 18ರ 2018ರಂದು ಚಾಮುಂಡಿ ಬೆಟ್ಟಕ್ಕೆ ತೆರಳಿ ದರ್ಶನ ಪಡೆದು ತಾಯಿ ಮಗ ಬಜಾಜ್ ಚೇತಕ್ ಸ್ಕೂಟರ್ನಲ್ಲಿ ತೀರ್ಥಯಾತ್ರೆ ಆರಂಭಿಸಿದ್ದರು. ಕನ್ಯಾಕುಮಾರಿಯಿಂದ ಕಾಶಿಯವರೆಗೂ ಅನೇಕ ಪುಣ್ಯಕ್ಷೇತ್ರಗಳ ದರ್ಶನ ಪಡೆದಿದ್ದಾರೆ. ಜೊತೆಗೆ ನೆರೆ ರಾಷ್ಟ್ರಗಳಾದ ನೇಪಾಳ, ಭೂತಾನ್, ಮ್ಯಾನ್ಮಾರ್ಗಳಲ್ಲಿ ಧಾರ್ಮಿಕ ಕ್ಷೇತ್ರಗಳಿಗೂ ಭೇಟಿ ನೀಡಿ ತೀರ್ಥಯಾತ್ರೆ ಪೂರ್ಣಗೊಳಿಸಿದ್ದಾರೆ. ಸುಮಾರು 56,522 ಕಿಲೋಮೀಟರ್ ಸ್ಕೂಟರ್ನಲ್ಲೇ ಪ್ರಯಾಣ ಬೆಳೆಸಿ ತೀರ್ಥಯಾತ್ರೆ ಮುಗಿಸಿ ಮೈಸೂರಿಗೆ ಆಗಮಿಸಿದ್ದಾರೆ.
ಯಾತ್ರೆಯ ಪ್ರೇರಣೆ: ಕೃಷ್ಣಕುಮಾರ್ ಅವರು ಬೆಂಗಳೂರಿನಲ್ಲಿ ಕಾರ್ಪೋರೇಟ್ ಕಂಪನಿಯಲ್ಲಿ ಟೀಮ್ ಲೀಡರ್ ಆಗಿ ಕೆಲಸ ಮಾಡುತ್ತಿದ್ದರು. ಒಂದು ದಿನ ತನ್ನ ತಾಯಿ ಬಳಿ "ನೀವು ಧಾರ್ಮಿಕ ಕ್ಷೇತ್ರಗಳನ್ನು ನೋಡಿದ್ದಿರಾ" ಎಂದು ಕೇಳಿದ್ದಾರೆ. ಆಗ ತಾಯಿ ಚೂಡಾರತ್ನ,"ಇಲ್ಲೇ ಇರುವ ಹಳೇಬೀಡು ಬೇಲೂರನ್ನೇ ನೋಡಿಲ್ಲ. ಧಾರ್ಮಿಕ ಕ್ಷೇತ್ರಗಳ ದರ್ಶನ ಹೇಗೆ ಮಾಡಲಿ" ಎಂದಿದ್ದಾರೆ. ಆಗ ಮಗನು ತಾಯಿಗೆ ಧಾರ್ಮಿಕ ಕ್ಷೇತ್ರಗಳ ದರ್ಶನ ಮಾಡಿಸುವ ಬಗ್ಗೆ ತೀರ್ಮಾನ ತೆಗೆದುಕೊಂಡಿದ್ದರು. ಹೀಗಾಗಿ ಮೊದಲು ನಂಜನಗೂಡು ಮಾರ್ಗವಾಗಿ ಕೇರಳ ರಾಜ್ಯಕ್ಕೆ ತಲುಪಿ, ಅಲ್ಲಿಯೇ 2 ತಿಂಗಳು ಇದ್ದು, ಮಠ ಆಶ್ರಮಗಳಲ್ಲಿ ತಂಗುತ್ತಿದ್ದರು. ಎಷ್ಟೋ ಜನ ಯಾತ್ರೆ ತಲುಪಲು ಹಣ ನೀಡುತ್ತಿದ್ದರು. ಆದರೆ ಇವರು ಯಾವ ಹಣವನ್ನು ಸ್ವೀಕರಿಸುತ್ತಿರಲಿಲ್ಲ. 2 ಹೊತ್ತಿನ ಊಟ ಮಾಡುತ್ತಿದ್ದರು. ಅಂದಾಜು 6.80 ಲಕ್ಷ ಹಣ ಖರ್ಚಾಗಿದೆಯಂತೆ.
ಬಜಾಜ್ ಚೇತಕ್ ಸ್ಕೂಟರ್ ತಂದೆಯ ನೆನಪಾಗಿದ್ದು, ಯಾತ್ರೆಯಲ್ಲಿ ಒಟ್ಟು 8 ಬಾರಿ ಟೈರ್ ಪಂಚರ್ ಆಗಿದೆ. ಸ್ಕೂಟರ್ ಹಿಂದಿನ ಚಕ್ರಕ್ಕೆ 5 ಮತ್ತು ಮುಂದಿನ ಚಕ್ರಕ್ಕೆ 3 ಬಾರಿ ಹೊಸ ಟೈರ್ ಹಾಕಿಸಿದ್ದು 30 ರಿಂದ 45 ಕಿಲೋಮೀಟರ್ ಮೈಲೇಜ್ ಕೊಟ್ಟಿದೆ.
ಇನ್ನು ಈ ಬಗ್ಗೆ ಮಾತನಾಡಿದ ಚೂಡಾರತ್ನ,"ನನ್ನ ಗಂಡ ಇದ್ದಾಗ ಪುಣ್ಯಕ್ಷೇತ್ರಗಳ ದರ್ಶನಕ್ಕೆ ಅವಕಾಶ ಒದಗಿ ಬಂದಿರಲಿಲ್ಲ. ಜೀವನವೆಲ್ಲಾ ಮನೆ ಕೆಲಸದಲ್ಲೇ ಕಳೆದಿದ್ದೆ. ನನ್ನ ಮಗ ಇಡೀ ಭಾರತದ ಧಾರ್ಮಿಕ ಕ್ಷೇತ್ರವಲ್ಲದೆ, ನೆರೆ ರಾಷ್ಟ್ರಗಳ ಧಾರ್ಮಿಕ ಕ್ಷೇತ್ರಗಳ ದರ್ಶನ ಮಾಡಿಸಿದ್ದಾನೆ. ನನ್ನ ಮಗ ನನ್ನ ಹೆಮ್ಮೆ" ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಈಗ ತಾಯಿ-ಮಗ ಯಾತ್ರೆ ಮುಗಿಸಿ ಮೈಸೂರಿಗೆ ಮರಳಿದ್ದು, ತಮ್ಮ ನಿವಾಸವನ್ನು ಜ್ಞಾನವಿಕಾಸ ಮಂದಿರವಾಗಿ ಪರಿವರ್ತಿಸಿ ಆಧ್ಯಾತ್ಮಿಕ ನೆಲೆಯಲ್ಲಿ ಸಮಾಜ ಸೇವೆಗೆ ಮುಂದಾಗಿದ್ದಾರೆ. ಇವರ ಈ ತೀರ್ಥಯಾತ್ರೆ ಕಂಡು ಮಹಿಂದ್ರ ಕಂಪನಿಯವರು ಒಂದು ಮಹಿಂದ್ರ ಕೆಯುವಿ100 ಎನ್ಎಕ್ಸ್ಟಿ ಕಾರನ್ನು ಉಡುಗೊರೆಯಾಗಿ ನೀಡಲು ನಿರ್ಧರಿಸಿದ್ದಾರೆ.
"ಈ ಯಾತ್ರೆ ಸಾಕಷ್ಟು ಅನುಭವ, ಸಂತೋಷ ತಂದಿದೆ. ಆಧ್ಯಾತ್ಮಿಕದ ಕಡೆ ಒಲವು ಹೆಚ್ಚು ಮಾಡಿದೆ" ಎಂದು ಕೃಷ್ಣಕುಮಾರ್ ಹೇಳಿದ್ದಾರೆ.