ಮೈಸೂರು: ಮೂರು ಬಾರಿ ಮುಂದೂಡಲ್ಪಟ್ಟಿರುವ ಕೆ-ಸೆಟ್ ಪರೀಕ್ಷೆಯನ್ನು ಆಗಸ್ಟ್ ಅಥವಾ ಸೆಪ್ಟೆಂಬರ್ನಲ್ಲಿ ನಡೆಸಲು ಅನುಮತಿ ನೀಡಿ ಎಂದು ಮೈಸೂರು ವಿವಿ ಕುಲಪತಿ ಪ್ರೊ. ಹೇಮಂತ್ ಕುಮಾರ್ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಈಗಾಗಲೇ 3 ಬಾರಿ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ-ಸೆಟ್) ಮುಂದೂಡಿದ್ದು, ಕಳೆದ ಏಪ್ರಿಲ್ನಲ್ಲೇ ನಡೆಯಬೇಕಿದ್ದ ಈ ಪರೀಕ್ಷೆಯನ್ನು ಜೂನ್ ತಿಂಗಳಿಗೆ ಮೂಂದೂಡಲಾಗಿದೆ. ನಂತರ ಆಗಸ್ಟ್ 6ರಂದು ಪರೀಕ್ಷೆ ನಡೆಸಲು ಅನುಮತಿ ಕೋರಿ ಪತ್ರ ಬರೆದಿದ್ದು, ಅದಕ್ಕೆ ಸರ್ಕಾರದಿಂದ ಈವರೆಗೂ ಅನುಮತಿ ಸಿಕ್ಕಿಲ್ಲ. ಹಾಗಾಗಿ ಮೈಸೂರು ವಿವಿ ಕುಲಪತಿ ಪ್ರೊ. ಹೇಮಂತ್ ಕುಮಾರ್ ಆಗಸ್ಟ್ 30 ಅಥವಾ ಸೆಪ್ಟೆಂಬರ್ 9ರಂದು ಪರೀಕ್ಷೆ ನಡೆಸಲು ಅನುಮತಿ ನೀಡಬೇಕೆಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ವಿಶ್ವವಿದ್ಯಾನಿಲಯದ ಧನಸಹಾಯ ಆಯೋಗದ (ಯುಜಿಸಿ) ಕಾರ್ಯದರ್ಶಿ ಜುಲೈ 6ರಂದು ಎಲ್ಲಾ ವಿಶ್ವವಿದ್ಯಾನಿಲಯಗಳು ಹಾಗೂ ಶಿಕ್ಷಣ ಸಂಸ್ಥೆಗಳು ಇದೇ ಸೆಪ್ಟೆಂಬರ್ ತಿಂಗಳೊಳಗೆ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಅಂತಿಮ ವರ್ಷದ ಪರೀಕ್ಷೆಗಳನ್ನು ನಡೆಸಬೇಕೆಂದು ಪತ್ರದಲ್ಲಿ ಸೂಚಿಸಿದ್ದಾರೆ. ಅಲ್ಲದೆ ಕೆ-ಸೆಟ್ನ ಎಲ್ಲಾ ಪ್ರಕ್ರಿಯೆಗಳನ್ನು ಈ ವರ್ಷದ ಅಂತ್ಯದೊಳಗೆ ಪೂರ್ಣಗೊಳಿಸಬೇಕೆಂದು ಯುಜಿಸಿ ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೆ-ಸೆಟ್ ಪರೀಕ್ಷೆಯನ್ನು ಆಗಸ್ಟ್ನಲ್ಲೂ ನಡೆಸದಿದ್ದರೆ ವಿದ್ಯಾರ್ಥಿಗಳು 1 ವರ್ಷ ಪರೀಕ್ಷೆಯಿಂದ ವಂಚಿತರಾಗುತ್ತಾರೆ. ಆದ್ದರಿಂದ ಪರೀಕ್ಷೆ ನಡೆಸಲು ಅನುಮತಿ ನೀಡಬೇಕು ಎಂದು ಕುಲಪತಿ ಹೇಮಂತ್ ಕುಮಾರ್ ಸರ್ಕಾರಕ್ಕೆ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ.